ADVERTISEMENT

ಟ್ವಿಟರ್‌ನಲ್ಲಿ ಬ್ಲೂ ಟಿಕ್ ಗುರುತಿಗಾಗಿ ಟ್ವೀಟಿಗರ ಜಾತಿ ವಾರ್!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 9:01 IST
Last Updated 6 ನವೆಂಬರ್ 2019, 9:01 IST
ಟ್ವಿಟರ್
ಟ್ವಿಟರ್   

ಬೆಂಗಳೂರು: #cancelallBlueTicksinIndia ಎಂಬ ಹ್ಯಾಶ್‌ಟ್ಯಾಗ್ ಬುಧವಾರ ಟಾಪ್ ಟ್ರೆಂಡಿಂಗ್ ಆಗಿದೆ. ಕಳೆದ ಮೂರು ದಿನಗಳಿಂದ #CasteistTwitter, #JaiBhimTwitter, #ब्राम्हणवादीट्विटर ಮೊದಲಾದ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದು ಈ ಟ್ವೀಟ್ ಅಭಿಯಾನದ ಮುಂದುವರಿದ ಭಾಗವಾಗಿದೆ ಇಂದು ಟ್ರೆಂಡ್ ಆಗುತ್ತಿರುವ #cancelallBlueTicksinIndia.

ಏನಿದು ವಿಷಯ?
ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ವಿಷಯಕ್ಕೆ ಸಂಬಂಧಿಸಿದಟ್ವಿಟರ್ ಅಭಿಯಾನಗಳನ್ನು ಮಾಡುತ್ತಲೇ ಇರುತ್ತವೆ. ಅದೇ ವೇಳೆ ಕೆಲವು ಪ್ರಮುಖ ಮಾಧ್ಯಮಗಳು ಕೂಡಾ ತಮ್ಮ ಸುದ್ದಿಗಳ ಚರ್ಚೆಗಳಿಗಾಗಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿ ಅದನ್ನು ಟ್ರೆಂಡ್ ಮಾಡುತ್ತಿರುತ್ತವೆ. ಇಂತಿರುವಾಗ ಮೈಕ್ರೋಬ್ಲಾಗಿಂಗ್ ಜಾಲತಾಣವಾದ ಟ್ವಿಟರ್, ಜಾತಿತಾರತಮ್ಯ ಮಾಡುತ್ತಿದೆ, ಕೆಲವರ ದನಿಗಳನ್ನು ದಮನ ಮಾಡುತ್ತಿದೆ ಎಂಬ ಆರೋಪವು ಟ್ವೀಟಿಗರಿಂದ ಮತ್ತೆ ಕೇಳಿ ಬಂದಿದೆ.

ಅಮೆರಿಕದಲ್ಲಿ ಟ್ವಿಟರ್ ಬಿಳಿಯರಿಗೆ ಉತ್ತೇಜನ ನೀಡುತ್ತಿದ್ದು, ಬ್ರಿಟನ್‌ನಲ್ಲಿ ಬ್ರೆಕ್ಸಿಟ್‍ ಬೆಂಬಲಿಗರಿಗೆ ಸಹಾಯ ಮಾಡುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ಆಡಳಿತಾಧಿಕಾರಿಗಳು ಭಿನ್ನಾಭಿಪ್ರಾಯ ಹೊಂದಿರುವವರ ಸದ್ದು ಅಡಗಿಸಲು ಟ್ವಿಟರ್ ಬಳಸುತ್ತಿದ್ದಾರೆ. ಭಾರತದಲ್ಲಿಯೂ ಇದೇ ರೀತಿಯ ಕಾರ್ಯಗಳು ನಡೆಯುತ್ತಿವೆ ಎಂಬುದು ಹಲವು ಟ್ವೀಟಿಗರ ಅಭಿಪ್ರಾಯ.

ADVERTISEMENT

ನವೆಂಬರ್ 2, ಶನಿವಾರದಿಂದ ಹಲವಾರು ಟ್ವೀಟಿಗರು ಟ್ವಿಟರ್ ವಿರುದ್ಧಪ್ರತಿಭಟಿಸುತ್ತಿದ್ದಾರೆ. ಟ್ವಿಟರ್ ಸಂಸ್ಥೆ ಜಾತಿವಾದ ಮತ್ತು ಕೋಮು ಧರ್ಮಾಂದತೆಯನ್ನು ಪ್ರೋತ್ಸಾಹಿಸಿ ಹಿಂದುಳಿದ ಜಾತಿ ಮತ್ತು ಅಲ್ಪ ಸಂಖ್ಯಾತರ ದನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂಬುದು ಅವರ ಆರೋಪ.

ಆನ್‌ಲೈನ್ ಪ್ರತಿಭಟನೆ
ದಿಲೀಪ್ ಮಂಡಲ್ ಅವರ ಟ್ವಿಟರ್ ಖಾತೆ ಶುಕ್ರವಾರ ಬ್ಲಾಕ್ ಆಗಿತ್ತು. ಖಾತೆ ಬ್ಲಾಕ್ ಮಾಡಿದ್ದರ ವಿಷಯದಲ್ಲಿ ಟ್ವಿಟರ್ ವಿರುದ್ಧ ಆನ್‌‌ಲೈನ್ ಪ್ರತಿಭಟನೆ ಶುರುವಾಗಿದೆ. ಮಂಡಲ್ ಅವರು ಮಖನ್‌ಲಾಲ್ ಚತುರ್ವೇದಿ ನ್ಯಾಷನಲ್ ಯುನಿವರ್ಸಿಟಿ ಆಫ್ ಜರ್ನಲಿಸಂ ಅಂಡ್ ಕಮ್ಯುನಿಕೇಷನ್ ಪ್ರೊಫೆಸರ್ ಆಗಿದ್ದು, ದಿ ಪ್ರಿಂಟ್ ಸುದ್ದಿ ತಾಣದ ಸಲಹಾ ಸಂಪಾದಕರಾಗಿದ್ದಾರೆ.

ಮಂಡಲ್ ಅವರ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದಾಗ ಟ್ವೀಟಿಗರು #restoredilipmandal ಎಂಬ ಹ್ಯಾಶ್‌ಟ್ಯಾಗ್ ಬಳಸಿ ಪ್ರತಿಭಟಿಸಿದ್ದರು. ಇದರ ಬೆನ್ನಲ್ಲೇ ಹಲವಾರು ಟ್ವೀಟಿಗರುಟ್ವಿಟರ್‌ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮುಂದೆ ಬಂದಿದ್ದಾರೆ. #CasteistTwitter, #JaiBhimTwitter ಮತ್ತು #BrahmanicalTwitter ಎಂಬ ಹ್ಯಾಶ್‌ಟ್ಯಾಗ್‌ಗಳುಟ್ರೆಂಡ್ ಆದ ನಂತರ #SackManishMaheshwari ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಯಿತು. ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಮನೀಶ್ ಮಹೇಶ್ವರಿ.

ಸ್ಕ್ರಾಲ್ ಡಾಟ್ ಇನ್‌ಗೆ ನೀಡಿದ ಸಂದರ್ಶನದಲ್ಲಿ ಟ್ವಿಟರ್ ಯಾವ ರೀತಿ ನಿಷ್ಪಕ್ಷವಾಗಿರಬೇಕು ಎಂಬುದರ ಬಗ್ಗೆ ದಿಲೀಪ್ ಮಂಡಲ್ ವಿವರಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ಷೇತ್ರ ಎಂದು ನಾವು ಯಾವುದನ್ನು ಹೇಳುತ್ತೇವೆಯೋ ಸಾಮಾಜಿಕ ಮಾಧ್ಯಮಗಳು ಕೂಡಾ ಅದರ ಭಾಗವಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಮಹತ್ವ ಪಾತ್ರ ವಹಿಸಿದ್ದು,ನಿಷ್ಪಕ್ಷಪಾತ ಮತ್ತುಎಲ್ಲ ಬಳಕೆದಾರರೊಂದಿಗೆ ಅದುನ್ಯಾಯಬದ್ದವಾಗಿರಬೇಕು ಎಂದಿದ್ದಾರವರು.

ಮೇಲ್ಜಾತಿಗೆ ನೀಲಿಗೆರೆ
ಟ್ವಿಟರ್ ಬಳಕೆದಾರರು ಮೇಲ್ಜಾತಿಯವರಾಗಿದ್ದರೆ ಅವರ ಖಾತೆ ಬೇಗನೆ ಅಧಿಕೃತ ಖಾತೆ (ವೆರಿಫೈಡ್ ಅಕೌಂಟ್) ಆಗುತ್ತದೆ. ಟ್ವಿಟರ್ ಖಾತೆ ಅಧಿಕೃತ ಆಗಿದ್ದರೆ ಬಳಕೆದಾರರ ಹೆಸರಿನ ಮುಂದೆ ಬ್ಲೂ ಟಿಕ್ (ನೀಲಿ ಬಣ್ಣದ ಸರಿ ಗುರುತು) ಕಾಣಬಹುದು. ಅಂದರೆ ಈ ಖಾತೆ ವಿಶ್ವಾಸಾರ್ಹ ಎಂದರ್ಥ. ಅದೇ ವೇಳೆ ಟ್ವಿಟರ್ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರ ಖಾತೆಗಳನ್ನುನಿಷೇಧಿಸುತ್ತಿದೆ ಎಂದು ಟ್ವೀಟಿಗರು ದೂರುತ್ತಿದ್ದಾರೆ.ಆಡಳಿತಾರೂಢ ಅಧಿಕಾರಿಗಳ ಅಥವಾ ಸರ್ಕಾರವನ್ನು ಟೀಕಿಸಿದರೆ ಟ್ವಿಟರ್ ಖಾತೆಯನ್ನು ನಿಷೇಧಿಸಲಾಗುತ್ತಿದೆ ಎಂದು ಮಂಡಲ್ ಆರೋಪಿಸಿದ್ದಾರೆ.

ಇತ್ತೀಚೆಗೆ ಮುಸ್ಲಿಮರನ್ನು ನಿಷೇಧಿಸಿ ( #मुस्लिमो_का_संपूर्ण_बहिष्कार) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಆದರೆ ಟ್ವಿಟರ್ ಈ ಹ್ಯಾಶ್‌ಟ್ಯಾಗ್ ಬಳಸಿ ದ್ವೇಷದ ಟ್ವೀಟ್ ಮಾಡಿದ ಯಾರೊಬ್ಬರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಅದೇ ಹೊತ್ತಲ್ಲಿ ಹಿಂದಿ ಕವಿ ಗೋರಖ್ ಪಾಂಡೆ ಅವರ ಕವನ ಶೇರ್ ಮಾಡಿದ್ದ ಸುಪ್ರೀಂಕೋರ್ಟ್ ವಕೀಲ ಸಂಜಯ್ ಹೆಗ್ಡೆ ಅವರನ್ನು ಟ್ವಿಟರ್ ನಿಷೇಧಿಸಿತ್ತು.

ಟ್ವಿಟರ್‌ನಲ್ಲಿ 'ದಲಿತ' ದನಿ
ಸೋಮವಾರ ದಲಿತ ಸಂಘಟನೆಯಾದ ಭೀಮ್ ಆರ್ಮಿ ಟ್ವಿಟರ್ ಇಂಡಿಯಾದ ಮುಂಬೈ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಟ್ವಿಟರ್ ಪರಿಶೀಲಿಸಲಿದೆ ಎಂಬ ಭರವಸೆ ಲಭಿಸಿದ ನಂತರ ಪ್ರತಿಭಟನೆ ಅಂತ್ಯಗೊಂಡಿತ್ತು. ಅವರು ನಮ್ಮಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಮಹಾರಾಷ್ಟ್ರದ ಭೀಮ್ ಆರ್ಮಿ ಮುಖ್ಯಸ್ಥ ಅಶೋಕ್ ಕಾಂಬ್ಳೆ ಹೇಳಿದ್ದಾರೆ.

ಟ್ವಿಟರ್ ಪ್ರತಿಷ್ಠಿತಮತ್ತು ಮೇಲ್ಜಾತಿಯವರ ಕೂಟ ಆಗಿತ್ತು. ಈಗ ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತರು ಟ್ವಿಟರ್ ಮೂಲಕ ದನಿಯೆತ್ತಬಹುದು ಎಂದು ಅಖಿಲ ಭಾರತ ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಅಶೋಕ್ ಭಾರತಿ ಹೇಳಿದ್ದಾರೆ. ದಲಿತರು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. 2018ರಲ್ಲಿ ನಾವು ಭಾರತ್ ಬಂದ್ ಮಾಡಿದ್ದು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸುವ ನಿರ್ಧಾರವನ್ನುಸುಪ್ರೀಂ ಕೋರ್ಟ್ ಹಿಂತೆಗೆದುಕೊಂಡಿತ್ತು. ಇದೀಗ ನಮ್ಮ ಯಶಸ್ಸನ್ನು ಕಂಡು ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತುಅಲ್ಪಸಂಖ್ಯಾತರು ಸಾಮಾಜಿಕ ಮಾಧ್ಯಮಗಳಲ್ಲಿ ಭಾಗಿಯಾಗುವುದನ್ನು ತಡೆಯುವ ಕಾರ್ಯ ಮಾಡಲಾಗುತ್ತಿದೆ ಎಂದಿದ್ದಾರೆ ಅಶೋಕ್ ಭಾರತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.