ನವದೆಹಲಿ: ಭಾರತ ಸರ್ಕಾರವು ಖಾಸಗಿತನದ ಹಕ್ಕನ್ನು ಗೌರವಿಸುತ್ತದೆ. ಆದರೆ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಡಿ ಸಂದೇಶದ ಮೂಲವನ್ನು ಗುರುತಿಸುವುದರ ಮೂಲಕ ಪ್ರತಿಬಂಧಿಸುವುದು ಮತ್ತು ತನಿಖೆ ನಡೆಸುವುದು ಗಂಭೀರ ಅಪರಾಧ ಎಂದೆನಿಸುವುದಿಲ್ಲ. ಇದು ಭಾರತದ ಸಾರ್ವಭೌಮತೆ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದಲೂ ತಪ್ಪೆನಿಸುವುದಿಲ್ಲ ಎಂದು ಕೇಂದ್ರ ಸರಕಾರ ದೆಹಲಿ ಹೈಕೋರ್ಟ್‌ಗೆ ಪ್ರತಿಕ್ರಿಯಿಸಿದೆ.
ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಜಾರಿಯಾಗುವುದನ್ನು ನಿರ್ಬಂಧಿಸುವಂತೆ ಕೋರಿ ವಾಟ್ಸ್‌ಆ್ಯಪ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬುಧವಾರ ಪ್ರತಿಕ್ರಿಯೆ ನೀಡಿತು.
ಅಂತಿಮ ಹಂತದಲ್ಲಿ ವಾಟ್ಸ್‌ಆ್ಯಪ್ ನಿಯಮಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದು ದುರದೃಷ್ಟಕರ ಎಂದು ಬಣ್ಣಿಸಿದ ಕೇಂದ್ರ ಸರ್ಕಾರ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾಗಳಲ್ಲಿ ಸಾಮಾಜಿಕ ತಾಣಗಳು ಕಾನೂನು ಪ್ರತಿಬಂಧಕಗಳನ್ನು ಅನುಸರಿಸಬೇಕು. ಆದರೆ ಭಾರತ ಕೇಳಿರುವ ಪ್ರತಿಬಂಧಕಗಳು ಬೇರೆ ರಾಷ್ಟ್ರಗಳು ಇಟ್ಟಿರುವ ಬೇಡಿಕೆಗಳಿಗಿಂತ ಕಡಿಮೆ ಪ್ರಮಾಣದ್ದು ಎಂದಿದೆ.
ವಾಟ್ಸ್‌ಆ್ಯಪ್ ರಾಷ್ಟ್ರದ ಆಂತರಿಕ ನಿಯಮಗಳ ಕುರಿತಾಗಿ ಖಾಸಗಿತನದ ಹಕ್ಕನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆಸಿದೆ. ಖಾಸಗಿತನ ಮೂಲಭೂತ ಹಕ್ಕು ಎಂಬುದನ್ನು ಕೇಂದ್ರವು ಪರಿಗಣಿಸಿದೆ. ಅದಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುತ್ತೇವೆ. ಆದರೆ ಇದೇ ವೇಳೆಯಲ್ಲಿ ರಾಷ್ಟ್ರದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಭಾರತ ಸರ್ಕಾರದ ಕರ್ತವ್ಯವಾಗಿದೆ ಎಂದು ಕೇಂದ್ರ ಅಧಿಕೃತ ಹೇಳಿಕೆಯಲ್ಲಿ ವಿವರಿಸಿದೆ.
ಹೊಸ ನಿಯಮಾವಳಿಗಳಿಂದ ವಾಟ್ಸ್‌ಆ್ಯಪ್ ಕಾರ್ಯಾಚರಿಸಲು ಯಾವುದೇ ತೊಡಕುಗಳು ಇಲ್ಲ. ಬಳಕೆದಾರರಿಗೂ ಯಾವುದೇ ಅಡ್ಡಿಆತಂಕಗಳಿಲ್ಲ. ಬಳಕೆದಾರನ ಖಾಸಗಿ ಮಾಹಿತಿಯನ್ನು ಒದಗಿಸದೆ ಇರುವ ವಾಟ್ಸ್‌ಆ್ಯಪ್‌ನ ನಿರ್ಧಾರದ ಬಗ್ಗೆ ಗೌರವವಿದೆ. ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಇಚ್ಛೆ ಸರಕಾರಕ್ಕಿಲ್ಲ. ಆದರೆ ನಿಯಮಾವಳಿಗಳು ನಿರ್ದಿಷ್ಟ ಪ್ರಕರಣಗಳಿಗೆ ಸೀಮಿತವಾಗಿವೆ. ಗಂಭೀರ ಪ್ರಕರಣಗಳಲ್ಲಿ ಪ್ರಮುಖವಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ತನಿಖೆ ನಡೆಸಲು, ಪ್ರತಿಬಂಧಕ ವಿಧಿಸಲು ಅಥವಾ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಅಂತಹ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ನೀಡಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.