ADVERTISEMENT

ಕ್ಲಬ್‌ಹೌಸ್‌: ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಿಗೆ ಆದ್ಯತೆ

ಪಿಟಿಐ
Published 3 ನವೆಂಬರ್ 2021, 11:00 IST
Last Updated 3 ನವೆಂಬರ್ 2021, 11:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ಪ್ರಕ್ರಿಯೆಯ ಮೊದಲ ಹಂತದಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳ ಅಪ್ಡೇಟ್‌ಅನ್ನು ಬಳಕೆದಾರರಿಗೆ ನೀಡುತ್ತಿರುವುದಾಗಿ ಕ್ಲಬ್‌ಹೌಸ್‌ ಹೇಳಿದೆ.

ಭಾರತದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಬೆಳವಣಿಗೆ ದಾಖಲಿಸಿರುವ ಕ್ಲಬ್‌ಹೌಸ್‌, ತನ್ನ ಬಳಕೆದಾರರಿಗೆ ‘ರೂಂ’ನಲ್ಲಿನ ಮಾತುಕತೆಗಳನ್ನು ಮತ್ತೊಮ್ಮೆ ಆಲಿಸುವ ಸೌಲಭ್ಯವನ್ನೂ ನೀಡುವುದಾಗಿ ಹೇಳಿದೆ. ಇದು ಜಾರಿಗೆ ಬಂದ ನಂತರ, ಯಾವುದೇ ‘ರೂಂ’ನ ಮಾತುಕತೆಗಳು ಪೂರ್ಣಗೊಂಡ ನಂತರದಲ್ಲಿಯೂ, ಆ ಮಾತುಕತೆಗಳನ್ನು ಆಲಿಸಲು ಸಾಧ್ಯವಾಗಲಿದೆ.

‘ಕಳೆದ ಕೆಲವು ತಿಂಗಳುಗಳಿಂದ ನಾವು ಭಾರತದ ಹಲವು ಬಳಕೆದಾರರ ಜೊತೆ ಮಾತನಾಡಿದ್ದೇವೆ. ಸ್ಥಳೀಯ ಭಾಷೆಗಳಲ್ಲಿ ಕ್ಲಬ್‌ಹೌಸ್‌ ಆ್ಯಪ್‌ ಲಭ್ಯವಾಗಬೇಕು ಎಂಬ ಬೇಡಿಕೆ ಬಹಳಷ್ಟು ಬಂದಿತ್ತು’ ಎಂದು ಕ್ಲಬ್‌ಹೌಸ್‌ನ ಹಿರಿಯ ಅಧಿಕಾರಿ ಆರತಿ ರಾಮಮೂರ್ತಿ ತಿಳಿಸಿದರು.

ADVERTISEMENT

ಕ್ಲಬ್‌ಹೌಸ್‌ನಲ್ಲಿ ಈ ವರ್ಷದ ಆರಂಭದಲ್ಲಿ ಪ್ರತಿದಿನ ಮೂರು ಲಕ್ಷ ‘ರೂಂ’ಗಳನ್ನು ಸೃಷ್ಟಿಸಲಾಗುತ್ತಿತ್ತು. ಈಗ ಆ ಸಂಖ್ಯೆಯು ಏಳು ಲಕ್ಷಕ್ಕೆ ತಲುಪಿದೆ. ಬಳಕೆದಾರರು ಪ್ರತಿದಿನ ಸರಾಸರಿ 70 ನಿಮಿಷ ಈ ಆ್ಯಪ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

‘ರೂಂ’ ಸೃಷ್ಟಿಸಿದವರು ತಮ್ಮಲ್ಲಿನ ಮಾತುಕತೆಗಳನ್ನು, ಅವು ಪೂರ್ಣಗೊಂಡ ನಂತರವೂ ಇತರರು ಆಲಿಸುವ ಆಯ್ಕೆ ನೀಡಬಹುದಾದ ಸೌಲಭ್ಯವು ಕೂಡ ಶೀಘ್ರದಲ್ಲಿಯೇ ಶುರುವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.