ವಾಷಿಂಗ್ಟನ್: ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ 53.3 ಕೋಟಿ ಫೇಸ್ಬುಕ್ ಬಳಕೆದಾರರ ದತ್ತಾಂಶವನ್ನು 2019ರಲ್ಲಿ ಆನ್‌ಲೈನ್ ವೇದಿಕೆಯಲ್ಲಿ ಸೋರಿಕೆ ಮಾಡಲಾಗಿತ್ತು ಎಂದು ಸೈಬರ್ ಕ್ರೈಂ ತಜ್ಞರು ಹೇಳಿರುವ ಬಗ್ಗೆ ವರದಿಯಾಗಿದೆ.
ಎಲ್ಲಾ 53.3 ಕೋಟಿ ಫೇಸ್ಬುಕ್ ಬಳಕೆದಾರರ ದತ್ತಾಂಶವನ್ನು ಸೋರಿಕೆ ಮಾಡಲಾಗಿತ್ತು ಎಂದು ‘ಹಡ್ಸನ್ ರಾಕ್ ಸೈಬರ್ ಕ್ರೈಮ್ ಇಂಟೆಲಿಜೆನ್ಸ್’ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲನ್ ಗಾಲ್ ಶನಿವಾರ ಟ್ವೀಟ್ ಮಾಡಿದ್ದಾರೆ.
ದತ್ತಾಂಶ ಸೋರಿಕೆಗೆ ಫೇಸ್‌ಬುಕ್‌ನ ನಿರ್ಲಕ್ಷ್ಯವೇ ಕಾರಣವಾಗಿತ್ತು ಎಂದು ಆರೋಪಿಸಿರುವ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.
‘ಬ್ಯುಸಿನೆಸ್ ಇನ್‌ಸೈಡರ್’ ವರದಿ ಪ್ರಕಾರ ಸೋರಿಕೆಯಾಗಿರುವ ಕೆಲವು ದತ್ತಾಂಶಗಳು ಈಗಲೂ ಪ್ರಸ್ತುತವೆಂದು ಹೇಳಲಾಗಿದೆ. ಆದರೆ ಇದನ್ನು ದೃಢೀಕರಿಸುವುದು ಎಎಫ್‌ಪಿಗೆ ಸಾಧ್ಯವಾಗಿಲ್ಲ. ಸೋರಿಕೆಯಾದ ಹಲವು ದೂರವಾಣಿ ಸಂಖ್ಯೆಗಳು ಫೇಸ್‌ಬುಕ್ ಖಾತೆ ಹೊಂದಿರುವವರು ಈಗಲೂ ಬಳಸುತ್ತಿರುವುದಾಗಿದೆ.
‘ಇದರ ಅರ್ಥ ನೀವು ಫೇಸ್‌ಬುಕ್ ಖಾತೆ ಹೊಂದಿದ್ದರೆ ಅದಕ್ಕೆ ನೀಡಿರುವ ದೂರವಾಣಿ ಸಂಖ್ಯೆ ಸೋರಿಕೆಯಾಗುವ ಸಾಧ್ಯತೆಯಿದೆ ಎಂದಾಗಿದೆ’ ಎಂದು ಗಾಲ್ ಹೇಳಿದ್ದಾರೆ.
ಆದರೆ, ಈ ವರದಿ ಹಳೆಯದ್ದು ಎಂದು ಫೇಸ್‌ಬುಕ್ ಪ್ರತಿಕ್ರಿಯಿಸಿದೆ.
‘ಇದು ಹಳೆಯ ದತ್ತಾಂಶಗಳಿಗೆ ಸಂಬಂಧಿಸಿದ್ದು, 2019ರಲ್ಲಿಯೂ ವರದಿಯಾಗಿತ್ತು. 2019ರ ಆಗಸ್ಟ್‌ನಲ್ಲಿ ಇದು ನಮ್ಮ ಗಮನಕ್ಕೆ ಬಂದಿತ್ತು, ಆಗಲೇ ಸಮಸ್ಯೆಯನ್ನು ಸರಿಪಡಿಸಿದ್ದೇವೆ’ ಎಂದು ಫೇಸ್‌ಬುಕ್ ವಕ್ತಾರರು ಎಎಫ್‌ಪಿಗೆ ತಿಳಿಸಿದ್ದಾರೆ.
ದತ್ತಾಂಶ ಸೋರಿಕೆಯಾಗಿರುವ ಖಾತೆಗಳ ಪೈಕಿ ಅಮೆರಿಕನ್ನರ 3.2 ಕೋಟಿ, ಫ್ರಾನ್ಸ್‌ನವರ 2 ಕೋಟಿ ಖಾತೆಗಳೂ ಸೇರಿವೆ ಎಂದು ಗಾಲ್ ಜನವರಿಯಲ್ಲಿ ಟ್ವೀಟ್ ಮಾಡಿದ್ದರು.
ಸೋರಿಕೆಯಾಗಿರುವ ದತ್ತಾಂಶಗಳಲ್ಲಿ ಹೆಸರು, ಇ–ಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಜನ್ಮ ದಿನಾಂಕ ಸೇರಿವೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.