ನವದೆಹಲಿ: ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್‌ನ ಖಾಸಗೀತನಕ್ಕೆ ಸಂಬಂಧಿಸಿದ ಹೊಸ ನೀತಿಯನ್ನು ಒಪ್ಪಿಕೊಳ್ಳುವುದು ಬಳಕೆದಾರರ ಸ್ವಯಂ ನಿರ್ಧಾರಕ್ಕೆ ಒಳಪಡಲಿದ್ದು, ಅವರು ಹೊಸ ನೀತಿಯನ್ನು ತಿರಸ್ಕರಿಸಲೂಬಹುದು ಎಂದು ದೆಹಲಿ ಹೈಕೋರ್ಟ್ ಸೋಮವಾರ ತಿಳಿಸಿದೆ.
‘ಇದೊಂದು ಖಾಸಗಿ ಮೊಬೈಲ್ ಅಪ್ಲಿಕೇಷನ್. ನೀವು ಹೊಸ ನೀತಿಯನ್ನು ಒಪ್ಪಿಕೊಳ್ಳದಿದ್ದರೆ ವಾಟ್ಸ್ ಆ್ಯಪ್ ಅಪ್ಲಿಕೇಷನ್ ಬಳಸಬೇಡಿ. ನೀವು ಬೇರೆ ಯಾವುದಾದರೂ ಮೊಬೈಲ್ ಅಪ್ಲಿಕೇಷನ್ ಬಳಕೆ ಮಾಡಿ‘ ಎಂದು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರು ವಾಟ್ಸ್ ಆ್ಯಪ್ ಹೊಸ ನೀತಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ವಕೀಲರಿಗೆ ತಿಳಿಸಿದ್ದಾರೆ.
ಫೆಬ್ರುವರಿಯಿಂದ ಜಾರಿಯಾಗಬೇಕಿದ್ದ ಹೊಸ ನೀತಿಯನ್ನು ವಾಟ್ಸ್ ಆ್ಯಪ್ ಮೇ ತಿಂಗಳಿಗೆ ಮುಂದೂಡಲಾಗಿದೆ.
‘ಪ್ರಸ್ತುತ ಹೆಚ್ಚಿನ ಮೊಬೈಲ್ ಅಪ್ಲಿಕೇಷನ್‌ಗಳ ನಿಯಮಗಳು ಮತ್ತು ಷರತ್ತುಗಳನ್ನು ಓದಿದರೆ, ನೀವು ಯಾವುದಕ್ಕೆ ಒಪ್ಪಿಗೆ ನೀಡುತ್ತಿದ್ದೀರಿ ಎಂದು ನಿಮಗೆ ಆಶ್ಚರ್ಯವಾಗುತ್ತದೆ‘ ಎಂದು ನ್ಯಾಯಾಲಯ ಹೇಳಿದೆ. ‘ಗೂಗಲ್ ನಕ್ಷೆಗಳೂ ನಿಮ್ಮ ಎಲ್ಲ ದತ್ತಾಂಶಗಳನ್ನು ಸಂಗ್ರಹಿಸುತ್ತಿವೆ‘ ಎಂದು ಅದು ಹೇಳಿದೆ.
ಅರ್ಜಿದಾರರು ತಿಳಿಸಿರುವಂತೆ ಯಾವ ಡೇಟಾವನ್ನು ಸೋರಿಕೆ ಮಾಡಲಾಗುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಗಣಿಸಲು ಸಮಯದ ಕೊರತೆ ಇರುವುದರಿಂದ, ಈ ಅರ್ಜಿಯ ವಿಚಾರಣೆಯನ್ನು ಜ.25ಕ್ಕೆ ಮುಂದೂಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಾಲಯದ ಅಭಿಪ್ರಾಯವನ್ನು ಒಪ್ಪಿರುವ ಕೇಂದ್ರ ಸರ್ಕಾರ, ಈ ಪ್ರಕರಣವನ್ನು ವಿಶ್ಲೇಷಿಸುವ ಅಗತ್ಯವಿದೆ ಎಂದು ಹೇಳಿದೆ.
ಹೊಸ ನೀತಿಯು ಸಂವಿಧಾನವು ಬಳಕೆದಾರರಿಗೆ ನೀಡಿರುವ ಖಾಸಗೀತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಕೀಲರು ಅರ್ಜಿಯಲ್ಲಿ ವಾದಿಸಿದ್ದಾರೆ.
ನ್ಯಾಯಾಲಯದಲ್ಲಿ ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್ ಪರ ವಾದ ಮಂಡಿಸಿದ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ, ‘ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿ ಸಮರ್ಥನೀಯವಲ್ಲ. ಅರ್ಜಿಯಲ್ಲಿ ಉಲ್ಲೇಖಿಸಿರುವ ಕೆಲವು ಸಮಸ್ಯೆಗಳಿಗೆ ಸರಿಯಾದ ತಳಹದಿಯೇ ಇಲ್ಲ‘ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಕುಟುಂಬ ಮತ್ತು ಸ್ನೇಹಿತರ ನಡುವೆ ವಿನಿಮಿಯವಾಗುವ ಖಾಸಗಿ ಸಂದೇಶಗಳು ಎನ್‌ಕ್ರಿಪ್ಟ್ ಆಗಿರುತ್ತವೆ. ಅವುಗಳನ್ನು ವಾಟ್ಸ್ ಆ್ಯಪ್ ಸಂಗ್ರಹಿಸುವುದಿಲ್ಲ. ಹಾಗೆಯೇ ಹೊಸ ನೀತಿಯಡಿಯಲ್ಲಿ ಈ ಗೌಪ್ಯತಾ ನಿಯಮಗಳು ಬದಲಾಗುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಬದಲಾದ ನೀತಿಯಲ್ಲಿ ವಾಟ್ಸ್ ಆ್ಯಪ್‌ನಲ್ಲಿರುವ ನಿಯಮಗಳು ವ್ಯಾವಹಾರಿಕ ಸಂದೇಶಗಳಿಗೆ (business chats) ಮಾತ್ರ ಅನ್ವಯಿಸುತ್ತವೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.