ADVERTISEMENT

ಮಕ್ಕಳೊಂದಿಗೆ ಬಿಗ್ ಬಾಸ್ ಶೋ ನೋಡಬೇಡಿ ಎಂದ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2023, 6:10 IST
Last Updated 3 ನವೆಂಬರ್ 2023, 6:10 IST
<div class="paragraphs"><p>ಕಾವ್ಯಾ ಶಾಸ್ತ್ರಿ</p></div>

ಕಾವ್ಯಾ ಶಾಸ್ತ್ರಿ

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಬೆಂಗಳೂರು: ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡ ಬಿಗ್‌ ಬಾಸ್‌ ಕನ್ನಡದ 10ನೇ ಆವೃತ್ತಿ ಆರಂಭವಾಗಿ ನಾಲ್ಕು ವಾರ ಆಗುತ್ತಿದೆ. ಈ ನಾಲ್ಕು ವಾರಗಳಲ್ಲಿ ಈ ಬಾರಿಯ ಬಿಗ್‌ ಬಾಸ್‌ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್‌ ಬಂಧನ, ಸ್ಪರ್ಧಿಗಳ ನಡುವಿನ ಅವಾಚ್ಯಗಳ ಬಳಕೆ–ಅದಕ್ಕೆ ವಾರದ ಪಂಚಾಯತಿಯಲ್ಲಿ ಸುದೀಪ್‌ ಅವರ ತರಾಟೆ ಎಲ್ಲವೂ ಆಗಿದೆ. 

ADVERTISEMENT

ಈ ವಿಚಾರವಾಗಿ ಈ ಹಿಂದೆ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಕಾವ್ಯಾ ಶಾಸ್ತ್ರಿಯವರು ಮಕ್ಕಳೊಂದಿಗೆ ಬಿಗ್‌ ಬಾಸ್‌ ಶೋ ನೋಡಬೇಡಿ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.  

‘ಈ ಸಲದ ಕನ್ನಡದ ಬಿಗ್‌ಬಾಸ್‌ ಸೀಸನ್ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ,  ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು,ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ -ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ. ಹಾಗೂ, ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅಲ್ಲದೆ ‘ನಾನು ಯಾವುದೇ ಕಾರ್ಯಕ್ರಮದ ವಿರೋಧಿಯಲ್ಲ. ಇದು ಚಿಕ್ಕ ಮಕ್ಕಳಿರುವ ಪೋಷಕರಿಗೆ ಜಾಗೃತಿ ಮೂಡಿಸಲು ಮಾತ್ರ. ಯಾವುದೇ ಪ್ರದರ್ಶನವಾಗಲಿ, ಧಾರಾವಾಹಿಗಳು ಸಹ ವೀಕ್ಷಿಸಲು ಸೂಕ್ತವಾದ ವಯಸ್ಸಿನ ವರ್ಗದ ಬಗ್ಗೆ ಹಕ್ಕು ನಿರಾಕರಣೆಯೊಂದಿಗೆ ಬರುತ್ತವೆ. ಆದರೆ, ನಾವು ಅದನ್ನು ನಿರ್ಲಕ್ಷಿಸುತ್ತೇವೆ ಮತ್ತು ನಮ್ಮ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನೋಡುತ್ತೇವೆ. ನಿಮ್ಮ ಮಗು ಪ್ರಜ್ಞಾಪೂರ್ವಕವಾಗಿ ಕುಳಿತು ನಕಾರಾತ್ಮಕ ವಿಷಯವನ್ನು ವೀಕ್ಷಿಸದಿದ್ದರೂ ಸಹ. ಕೇವಲ ಆಡಿಯೋ ಕೂಡ ಮಗುವಿನ ಮೇಲೆ ಪರಿಣಾಮ ಬೀರಬಹುದು. ದಯವಿಟ್ಟು ನಿಮ್ಮ ಶಕ್ತಿಗಳನ್ನು ಹಾಗೂ ನಿಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸಿ’ ಎಂದು ಬರೆದುಕೊಂಡಿದ್ದಾರೆ.

ಕಾವ್ಯಾ ಅವರು ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಸೀಸನ್‌ನಲ್ಲಿ ಭುವನ್, ರೇಖಾ, ಕಾರುಣ್ಯ, ನಿರಂಜನ್ ದೇಶಪಾಂಡೆ, ಶಾಲಿನಿ ಕೂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.