ಬೆಂಗಳೂರು: ಜಗತ್ತಿನ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ಟ್ವಿಟರ್ ಅನ್ನು ಖರೀದಿಸುತ್ತಿರುವ ಇಲಾನ್ ಮಸ್ಕ್, ಆ ಕಂಪನಿಯ ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ್ದಾರೆ. ಮುಂದೆ ಟ್ವಿಟರ್ ಬಳಕೆ ಉಚಿತವಾಗಿ ಸಿಗುವುದಿಲ್ಲ ಎಂಬರ್ಥದಲ್ಲಿ ಮಸ್ಕ್ ಟ್ವೀಟಿಸಿದ್ದಾರೆ.
ಟ್ವಿಟರ್‌ನಲ್ಲಿ ಶೇಕಡ 100ರಷ್ಟು ಷೇರುಗಳನ್ನು ಖರೀದಿಸುತ್ತಿರುವ ಅವರು, ಕಳೆದ ತಿಂಗಳಿಂದ ಟ್ವಿಟರ್‌ಗೆ ಹಲವು ಬದಲಾವಣೆಗಳನ್ನು ಸೂಚಿಸುತ್ತಿದ್ದಾರೆ. ವಾಣಿಜ್ಯ ಬಳಕೆ ಮತ್ತು ಸರ್ಕಾರದ ಬಳಕೆದಾರರಿಗೆ ಟ್ವಿಟರ್ ಶುಲ್ಕ ವಿಧಿಸಲಿದೆ.
ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಎಂದಿನಂತೆ ಉಚಿತವಾಗಿಯೇ ಇರಲಿದೆ ಎಂದಿರುವ ಅವರು, ವಾಣಿಜ್ಯ ಮತ್ತು ಸರ್ಕಾರದ ಬಳಕೆದಾರರಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದಿದ್ದಾರೆ. ಈ ಮೂಲಕ ಟ್ವಿಟರ್, ಪಾವತಿಸಿ ಬಳಸಬಹುದಾದ ಸಾಮಾಜಿಕ ಮಾಧ್ಯಮವಾಗಲಿದೆ.
ಟ್ವಿಟರ್ ಈಗಾಗಲೇ 'ಟ್ವಿಟರ್ ಬ್ಲೂ' ಮೂಲಕ ಪಾವತಿ ಆಧಾರಿತ ಸೇವೆಗಳನ್ನು ನೀಡುತ್ತಿದೆ. ಆ ಸೇವೆಯನ್ನು ಪಡೆಯುತ್ತಿರುವ ಬಳಕೆದಾರರಿಗೆ ಪ್ರೀಮಿಯಂ ಆಯ್ಕೆಗಳು ಮತ್ತು ಬಳಕೆಗೆ ತಕ್ಕಂತೆ ಆ್ಯಪ್‌ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಪ್ರಸ್ತುತ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಐಒಎಸ್, ಆ್ಯಂಡ್ರಾಯ್ಡ್ ಹಾಗೂ ವೆಬ್ ಆವೃತ್ತಿಯಲ್ಲೂ ಟ್ವಿಟರ್ ಬ್ಲೂ ಲಭ್ಯವಿದೆ. ತಿಂಗಳ ಚಂದಾದಾರಿಕೆ ಆಯ್ಕೆಯನ್ನು ನೀಡಲಾಗುತ್ತಿದೆ.
ಆದರೆ, ಈಗ ಮಸ್ಕ್ ಪ್ರಸ್ತಾಪಿಸಿರುವುದು ಸಾಮಾನ್ಯ ಬಳಕೆದಾರರು ಬಳಸುತ್ತಿರುವ ಟ್ವಿಟರ್ ಬೇಸಿಕ್ ಪ್ಲಾಟ್‌ಫಾರ್ಮ್ ಕುರಿತು. ಅಲ್ಲಿರುವ ವಾಣಿಜ್ಯ ಬಳಕೆದಾರರು ಮತ್ತು ಸರ್ಕಾರದ ಬಳಕೆದಾರರಿಗೆ ಶುಲ್ಕ ವಿಧಿಸುವ ಸಾಧ್ಯತೆಯನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ (ಸುಮಾರು ₹3.37 ಲಕ್ಷ ಕೋಟಿ) ಮೊತ್ತಕ್ಕೆ ಮಸ್ಕ್ ಖರೀದಿಸುತ್ತಿದ್ದಾರೆ. ಕಂಪನಿಯ ಸಂಪೂರ್ಣ ಷೇರುಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಖಾಸಗಿ ಕಂಪನಿಯಾಗಿ ರೂಪಿಸುತ್ತಿರುವ ಅವರ, ಮತ್ತೆ ಮೂರು ವರ್ಷಗಳಲ್ಲಿ ಅದನ್ನು ಸಾರ್ವಜನಿಕಗೊಳಿಸುವ ಯೋಜನೆ ಹೊಂದಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಟ್ವಿಟರ್ ಅನ್ನು ಲಾಭದ ಹಾದಿಗೆ ತರಲು ಮಸ್ಕ್ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಟ್ಚಿಟರ್ ಉಚಿತ ಬಳಕೆಯನ್ನು ನಿಲ್ಲಿಸುವ ಕುರಿತು ಯೋಜನೆ ರೂಪಿಸಿರುವ ಮಸ್ಕ್, ಟ್ವಿಟರ್ ಬಳಕೆದಾರರ ಸಂಖ್ಯೆಯನ್ನೂ ಹೆಚ್ಚಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪಾವತಿ ಮಾಡುವ ಬಳಕೆದಾರರ ಸಂಖ್ಯೆ ಹೆಚ್ಚಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.