ADVERTISEMENT

ಹಕ್ಕಿ ಈಗ ಸ್ವತಂತ್ರವಾಗಿದೆ: ಟ್ವಿಟರ್‌ ಖರೀದಿ ಬಳಿಕ ಮಸ್ಕ್‌ ಮೊದಲ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2022, 6:02 IST
Last Updated 28 ಅಕ್ಟೋಬರ್ 2022, 6:02 IST
ಸ್ಯಾನ್‌ ಫ್ರಾನ್‌ಸಿಸ್ಕೊ, ಅಮೆರಿಕ: ಟೆಸ್ಲಾ ಮತ್ತು ಸ್ಪೇಸೆಕ್ಸ್‌ ಸಿಇಒ ಎಲನ್‌ ಮಸ್ಕ್‌ ಅವರು ಗುರುವಾರ ಟ್ವಿಟರ್‌ ಮುಖ್ಯ ಕಚೇರಿಗೆ ಸಿಂಕ್‌ ಹಿಡಿದು ಆಗಮಿಸಿದರು.
ಸ್ಯಾನ್‌ ಫ್ರಾನ್‌ಸಿಸ್ಕೊ, ಅಮೆರಿಕ: ಟೆಸ್ಲಾ ಮತ್ತು ಸ್ಪೇಸೆಕ್ಸ್‌ ಸಿಇಒ ಎಲನ್‌ ಮಸ್ಕ್‌ ಅವರು ಗುರುವಾರ ಟ್ವಿಟರ್‌ ಮುಖ್ಯ ಕಚೇರಿಗೆ ಸಿಂಕ್‌ ಹಿಡಿದು ಆಗಮಿಸಿದರು.   

ಬೆಂಗಳೂರು: ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬೆನ್ನಲ್ಲೇ, 'ಹಕ್ಕಿ ಈಗ ಸ್ವತಂತ್ರವಾಗಿದೆ' ಎಂಬ ಚುಟುಕು ಸಂದೇಶವನ್ನು ಜಗತ್ತಿಗೆ ರವಾನಿಸಿದ್ದಾರೆ.

ಟ್ವಿಟರ್‌ ಕಂಪನಿಯನ್ನು ಸುಮಾರು ₹ 3.62 ಲಕ್ಷ ಕೋಟಿಗೆ ಖರೀದಿಸಿರುವ ಸ್ಪೇಸೆಕ್ಸ್‌ ಮಾಲಿಕ, ವಿಶ್ವದ ಅಗರ್ಭ ಶ್ರೀಮಂತರಲ್ಲಿ ಒಬ್ಬರಾದ ಮಸ್ಕ್‌ ಶುಕ್ರವಾರ ಮೊದಲ ಟ್ವೀಟ್‌ ಮಾಡಿದ್ದಾರೆ. ಮೂರು-ನಾಲ್ಕು ಪದಗಳಿರುವ ಸಣ್ಣ ಒಂದು ವಾಕ್ಯವು ನಾನಾರ್ಥಗಳನ್ನು ಕೊಡುವಂತೆ ಪೋಸ್ಟ್‌ ಮಾಡಿದ್ದಾರೆ.

ಮಸ್ಕ್‌ ಅವರು ಟ್ವಿಟರ್‌ ಕಂಪನಿಗೆ ಮಾಲೀಕರಾದ ತಕ್ಷಣ ಟ್ವಿಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, ಭಾರತ ಮೂಲದ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ವಜಾಗೊಳಿಸಿದ್ದಾರೆ. ಬೆನ್ನಲ್ಲೇ, ಟ್ವಿಟರ್‌ನಲ್ಲಿರುವ ನಕಲಿ ಖಾತೆಗಳ ಕುರಿತು ಇವರೆಲ್ಲರೂ ತಮ್ಮ ದಿಕ್ಕು ತಪ್ಪಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಹಿಂದೆ ಮಸ್ಕ್‌ ಅವರು ವಾಕ್ ಸ್ವಾತಂತ್ರ್ಯದ ಪರವಾಗಿ ಇರುವುದಾಗಿ ಹೇಳಿದ್ದರು.

ಪರಾಗ್ ಅಗರವಾಲ್ ಮತ್ತು ನೆಡ್‌ ಸೆಗಲ್‌ ಅವರು ಸ್ಯಾನ್‌ ಫ್ರಾನ್‌ಸಿಸ್ಕೊದಲ್ಲಿರುವ ಟ್ವಿಟರ್‌ ಮುಖ್ಯ ಕಚೇರಿಯಿಂದ ಹೊರಗೆ ಹೋಗಿದ್ದಾರೆ ಮತ್ತು ಅವರು ಪುನಃ ಕಚೇರಿಗೆ ವಾಪಸ್‌ ಆಗುವುದಿಲ್ಲ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಟ್ವಿಟರ್‌ ಮುಖ್ಯ ಕಚೇರಿಗೆ ಗುರುವಾರ ಸಿಂಕ್‌ ಹಿಡಿದು ಆಗಮಿಸಿದ್ದ ಮಸ್ಕ್‌ ಅವರು 'ಸಿಂಕ್‌ ಅನ್ನು ಅಳವಡಿಸೋಣ' ಎಂದು ಟ್ವೀಟ್‌ ಮಾಡಿದ್ದರು. ಸಾಮಾನ್ಯವಾಗಿ ಸಿಂಕ್‌ಅನ್ನು ಸ್ವಚ್ಛಗೊಳಿಸುವ ಉದ್ದೇಶಕ್ಕೆ ಬಳಸಲಾಗುತ್ತದೆ. ಮಸ್ಕ್‌ ಅವರು‌ ಸಿಂಕ್‌ ಜೊತೆಗೆ ಬಂದಿದ್ದರ ವಿಡಿಯೊ ಟ್ವೀಟಿಗರನ್ನು ನಗೆಗಡಲಲ್ಲಿ ತೇಲಿಸಿತ್ತು. ಈ ವಿಡಿಯೊಗೆ ಸಂಬಂಧಿಸಿ ನಾನಾ ಬಗೆಯ ಮೀಮ್‌ಗಳೂ ಹರಿದಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.