ಮೆಟು (ಇಥಿಯೋಪಿಯ): ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನೆ ಅವನು. ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆಯಿರಿ ಎಂದಿದ್ದರು ಸ್ವಾಮಿ ವಿವೇಕಾನಂದ. ಈ ರೀತಿಯ ಇಚ್ಛಾ ಶಕ್ತಿ ಹೊಂದಿದ ಮಹಿಳೆ ಅಲ್ಮಾಜ್ ಡೆರೆಸೆ.
ಪಶ್ಚಿಮ ಇಥಿಯೋಪಿಯದ ಮೆಟು ನಿವಾಸಿ, 21ರ ಹರೆಯದ ಅಲ್ಮಾಜ್, ಮಗುವಿಗೆ ಜನ್ಮ ನೀಡಿದ 30 ನಿಮಿಷಗಳ ನಂತರ ಪರೀಕ್ಷೆ ಬರೆದಿದ್ದಾರೆ.
ಸೆಕೆಂಡರಿ ಶಾಲಾ ಪರೀಕ್ಷೆ ರಂಜಾನ್ ಹಬ್ಬದ ಸಲುವಾಗಿ ಮುಂದೂಡಲಾಗಿತ್ತು. ಹೆರಿಗೆಗೆ ಮುನ್ನ ಪರೀಕ್ಷೆ ಬರೆಯುತ್ತೇನೆ ಎಂದಿದ್ದರು ಅಲ್ಮಾಜ್. ಆದರೆ ಪರೀಕ್ಷೆ ಆರಂಭವಾಗುವುದಕ್ಕಿಂತ ಮುನ್ನವೇ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂತು.ಪದವಿ ಪಡೆಯಲು ಇನ್ನೊಂದು ವರ್ಷ ಕಾಯಬೇಕು.ಹಾಗಾಗಿ ನಾನು ಈ ವರ್ಷವೇ ಪರೀಕ್ಷೆ ಬರೆಯುತ್ತೇನೆ ಎಂದ ಈಕೆ ಹೆರಿಗೆಯಾಗಿ 30 ನಿಮಿಷಗಳಲ್ಲಿಯೇ ಆಸ್ಪತ್ರೆಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದಾರೆ.
ನನಗೆ ಪರೀಕ್ಷೆ ಬರೆಯಲೇ ಬೇಕೆಂಬ ಹಂಬಲ ಇತ್ತು. ಹಾಗಾಗಿ ಹೆರಿಗೆ ನೋವು ಕೂಡಾ ಕಷ್ಟ ಎಂದೆನಿಸಿಲ್ಲ ಎಂದು ಅಲ್ಮಾಸ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಅಲ್ಮಾಜ್ ಅವರ ಈ ದೃಢ ನಿರ್ಧಾರ ಮತ್ತು ಧೈರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.