ಲಂಡನ್: ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಸಂಸ್ಥೆಯು ತಾಲಿಬಾನ್ ಮತ್ತು ತಾಲಿಬಾನ್ ಬೆಂಬಲಿಸುವ ಎಲ್ಲಾ ಕಂಟೆಂಟ್‌ಗಳನ್ನು ತನ್ನ ವೇದಿಕೆಯಿಂದ ನಿಷೇಧಿಸಿದೆ. ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವುದಾಗಿ ಫೇಸ್‌ಬುಕ್ ಹೇಳಿದೆ.
ದಂಗೆಕೋರ ಗುಂಪಿಗೆ ಸಂಬಂಧಿಸಿದ ಕಂಟೆಂಟ್‌ಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ಅವುಗಳನ್ನು ತೆಗೆದುಹಾಕಲು ಅಫ್ಗಾನಿಸ್ತಾನಕ್ಕೆ ಮೀಸಲಾದ ತಜ್ಞರ ತಂಡವನ್ನು ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.
ಹಲವು ವರ್ಷಗಳಿಂದ, ತಾಲಿಬಾನ್ ತನ್ನ ಸಂದೇಶಗಳನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದೆ. ಆದರೆ, ಇದೀಗ ಫೇಸ್‌ಬುಕ್ ಎಚ್ಚೆತ್ತುಕೊಂಡಿದೆ.
‘ತಾಲಿಬಾನ್ ಅನ್ನು ಅಮೆರಿಕದ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ನಿರ್ಧರಿಸಲಾಗಿದೆ. ನಮ್ಮ ಅಪಾಯಕಾರಿ ಸಂಘಟನೆಯ ನೀತಿಗಳ ಅಡಿಯಲ್ಲಿ ನಾವು ಅವರನ್ನು ನಮ್ಮ ಸೇವೆಗಳಿಂದ ನಿಷೇಧಿಸಿದ್ದೇವೆ. ಇದರರ್ಥ, ನಾವು ತಾಲಿಬಾನ್ ಅಥವಾ ಅವರ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ. ಅವರ ಪ್ರಶಂಸೆ, ಬೆಂಬಲ ಮತ್ತು ಪ್ರಾತಿನಿಧ್ಯವನ್ನು ನಿಷೇಧಿಸುತ್ತೇವೆ’ಎಂದು ಫೇಸ್‌ಬುಕ್ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ.
‘ನಾವು ಅಫ್ಗಾನಿಸ್ತಾನಕ್ಕೆ ಮೀಸಲಾದ ಪರಿಣಿತರ ತಂಡವನ್ನು ಹೊಂದಿದ್ದೇವೆ, ಅವರು ಅಲ್ಲಿನ ಸ್ಥಳೀಯ ದರಿ ಮತ್ತು ಪಾಷ್ಟೋ ಭಾಷೆಗಳನ್ನು ಅರಿತವರಾಗಿದ್ದು, ಸ್ಥಳೀಯ ಸನ್ನಿವೇಶದ ಜ್ಞಾನವನ್ನು ಹೊಂದಿದ್ದಾರೆ, ನಮ್ಮ ವೇದಿಕೆಯಲ್ಲಿ ಸಮಸ್ಯೆಗಳನ್ನು ಗುರುತಿಸಿ ಎಚ್ಚರಿಸುವ ಮೂಲಕ ಅವರು ಸಹಾಯ ಮಾಡುತ್ತಾರೆ’ಎಂದು ವಕ್ತಾರರು ಹೇಳಿದ್ದಾರೆ.
ಈ ನೀತಿಯು ತನ್ನ ಪ್ರಮುಖ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್ ಸೇರಿದಂತೆ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ ಅನ್ವಯಿಸುತ್ತದೆ ಎಂದು ಫೇಸ್‌ಬುಕ್ ಹೈಲೈಟ್ ಮಾಡಿದೆ.
ತಾಲಿಬಾನ್‌ಗಳು ವಾಟ್ಸ್‌ಆ್ಯಪ್ಪ್ ಅನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ ಎಂಬ ವರದಿಗಳಿವೆ. ಆ್ಯಪ್‌ನಲ್ಲಿರುವ ಖಾತೆಗಳು ತಾಲಿಬಾನ್ ಗುಂಪಿಗೆ ಲಿಂಕ್ ಆಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಫೇಸ್‌ಬುಕ್ ಬಿಬಿಸಿಗೆ ತಿಳಿಸಿದೆ.
ಭಾನುವಾರ ತಾಲಿಬಾನ್ ಉಗ್ರರು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ದಾಳಿ ಮಾಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದರು. ಬಳಿಕ, ಕಾಬೂಲ್ ಬಿಟ್ಟು ತೆರಳಲು ಸಾವಿರಾರು ಭಯಗ್ರಸ್ತ ಆಫ್ಗಾನ್ ಜನರು ಏರ್‌ಪೋರ್ಟ್‌ಗೆ ಮುಗಿಬಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.