ಚೆನ್ನೈ: ಕೋವಿಡ್-19 ಕಾರಣದಿಂದಾಗಿ ವಿವಾಹ ಸಮಾರಂಭಕ್ಕೆ ಆನ್‌ಲೈನ್ ಮೂಲಕ ಹಾಜರಾದ ಅತಿಥಿಗಳ ಮನೆಗೆ ವಿವಾಹ ಭೋಜನವನ್ನು ಬಾಳೆಎಲೆ ಸಹಿತ ತಲುಪಿಸಿರುವ ಕುಟುಂಬವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನಸೆಳೆದಿದೆ.
ಮದುವೆಗೆ ಆನ್‌ಲೈನ್‌ನಲ್ಲಿ ಹಾಜರಾದ ಅತಿಥಿಯೊಬ್ಬರು ತಮ್ಮ ಮನೆಗೆ ಬಂದ ಸಾಂಪ್ರದಾಯಿಕ ಮದುವೆ ಊಟದ ಬುತ್ತಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಫೊಟೊಗಳು ವೈರಲ್ ಆಗಿವೆ.
'ಮದುವೆ ಆಮಂತ್ರಣದ ಹೊಸ ವಿಧಾನವಿದು. ಮದುವೆ ಊಟವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ,' ಎಂದು ಶಿವಾನಿ ಎಂಬುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಊಟದ ಬುತ್ತಿ ಜೊತೆಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಮನೆಗಳಿಗೆ ತಲುಪಿಸಲಾಗಿದೆ. ಎಲೆಯ ಯಾವ ಭಾಗದಲ್ಲಿ ಯಾವ ಅಡುಗೆ ಬಡಿಸಬೇಕು ಎಂಬುದನ್ನು ಕ್ರಮ ಸಂಖ್ಯೆ ಮೂಲಕ ವಿವರಿಸಲಾಗಿದೆ.
ಅಂದಹಾಗೆ ಈ ಮದುವೆ ನಡೆದಿರುವುದು ತಮಿಳುನಾಡಿನಲ್ಲಿ. ಶಿವಪ್ರಕಾಶ್ ಮತ್ತು ಮಹತಿ 'ವೆಬ್‌ಕಾಸ್ಟ್ ಮದುವೆ' ಮೂಲಕ ಡಿ.10ರಂದು ದಾಂಪತ್ಯಕ್ಕೆ ಕಾಲಿರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.