ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಕಂಪನಿಯನ್ನು ಖರೀದಿಸಿದ ಬಳಿಕ ಇಲಾನ್ ಮಸ್ಕ್ ಅವರು ವಜಾ ಮಾಡಿರುವ ಮೂವರು ಉನ್ನತ ಅಧಿಕಾರಿಗಳು ಒಟ್ಟು ₹1002 ಕೋಟಿ ಮೊತ್ತದ ಪರಿಹಾರ ಪಡೆಯುವ ನಿರೀಕ್ಷೆ ಇದೆ ಎಂದು ಸಂಶೋಧನಾ ಸಂಸ್ಥೆ ‘ಈಕ್ವಿಲರ್’ ಹೇಳಿದೆ.
ಟ್ವಿಟರ್‌ನ ಸಿಇಒ ಪರಾಗ್ ಅಗ್ರವಾಲ, ಸಿಎಫ್‌ಒ ನೆಡ್ ಸೆಗಲ್ ಹಾಗೂ ಕಾನೂನು ವ್ಯವಹಾರ ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಅವರು ವಜಾ ಆಗಿರುವ ಪ್ರಮುಖರಾಗಿದ್ದಾರೆ.
ಈಕ್ವಿಲರ್ ಸಂಸ್ಥೆಯ ಪ್ರಕಾರ, ಪರಾಗ್ ಅವರಿಗೆ ಪರಿಹಾರ ರೂಪದಲ್ಲಿ ₹472 ಕೋಟಿ ಸಿಗಲಿದೆ. ಸೆಗಲ್ ₹366 ಕೋಟಿ ಹಾಗೂ ವಿಜಯಾ ಅವರು ₹164 ಕೋಟಿ ಪರಿಹಾರ ಮೊತ್ತ ಪಡೆಯಲಿದ್ದಾರೆ.
ಇಷ್ಟೇ ಅಲ್ಲದೆ, ಈ ಮೂವರು ಕಂಪನಿಯಲ್ಲಿ ಹೊಂದಿರುವ ಷೇರುಪಾಲಿಗೆ ಬದಲಾಗಿ ಇಲಾನ್ ಮಸ್ಕ್ ಅವರಿಂದ ಒಟ್ಟಾರೆ ₹535 ಕೋಟಿ ಮೊತ್ತವನ್ನೂ ಪಡೆಯಲಿದ್ದಾರೆ.
ಆದರೆ, ಈ ಕುರಿತು ಟ್ವಿಟರ್ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಜಯಾ ಅವರು ಕಂಪನಿಯಲ್ಲಿ ಹೊಂದಿರುವ ಷೇರುಗಳ ಮೌಲ್ಯವು ₹286 ಕೋಟಿ ಇದೆ. ಸೆಗಲ್ ಅವರು ₹181 ಕೋಟಿ ಹಾಗೂ ಪರಾಗ್ ಅವರು ₹69 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ಟ್ವಿಟರ್ ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯ ಪ್ರಕಾರ, ಪರಾಗ್ ಅವರಿಗೆ 2021ರಲ್ಲಿ ₹250 ಕೋಟಿಯನ್ನು ಕಂಪನಿ ಪಾವತಿಸಿದೆ.
‘ಪರಿಶೀಲನಾ ಸಮಿತಿ’: ಟ್ವಿಟರ್ ಕಂಪನಿಯು ವಿಷಯ ಪರಿಶೀಲನಾ ಸಮಿತಿ ರಚನೆ ಮಾಡಲಿದೆ ಎಂದು ಇಲಾನ್ ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಪ್ರಕಟವಾಗುವ ಯಾವುದೇ ಪ್ರಮುಖ ವಿಷಯ ಅಥವಾ ಖಾತೆಯನ್ನು ಮರುಸ್ಥಾಪಿಸುವ ನಿರ್ಧಾರವು ಸಮಿತಿ ಸಭೆಯ ಬಳಿಕವೇ ಆಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ, ಸಮಿತಿಯು ಹೇಗೆ ಕೆಲಸ ಮಾಡಲಿದೆ ಎನ್ನುವ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.
ಟ್ವಿಟರ್‌ನ ವಿಷಯ ಪರಿಶೀಲನಾ ನೀತಿಗಳಲ್ಲಿ ಸದ್ಯ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಪೇಯ್ಡ್ ಜಾಹೀರಾತು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕದ ಜನರಲ್ ಮೋಟರ್ಸ್ (ಜಿಎಂ) ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.