ADVERTISEMENT

ಗೂಗಲ್‌ಗೆ 25ರ ಸಂಭ್ರಮ: ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್‌ ಎಂಜಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2023, 3:17 IST
Last Updated 27 ಸೆಪ್ಟೆಂಬರ್ 2023, 3:17 IST
   

ಬೆಂಗಳೂರು: ಅಂತರ್ಜಾಲ ಜಗತ್ತಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಸರ್ಚ್‌ ಎಂಜಿನ್‌ ಗೂಗಲ್‌, ತನ್ನ 25ನೇ ಜನ್ಮದಿನವನ್ನು ಇಂದು (ಬುಧವಾರ) ಆಚರಿಸಿಕೊಳ್ಳುತ್ತಿದೆ. ಇದಕ್ಕಾಗಿ ವಿಭಿನ್ನ ಡೂಡಲ್‌ ಸಿದ್ಧಪಡಿಸಿ ತನ್ನ ಸರ್ಚ್‌ ಎಂಜಿನ್‌ನಲ್ಲಿ ಪ್ರಕಟಿಸಿದೆ.

ಆಲ್ಪಬೆಟ್‌ ಇಂಕ್‌ ಕಂಪನಿಯು ಈ ವಿಶೇಷ ಸಂದರ್ಭದಲ್ಲಿ ಕಳೆದು ಹೋದ 27 ವಸಂತಗಳಲ್ಲಿ ಗೂಗಲ್ ಬೆಳೆದುಬಂದ ಹಾದಿಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದೆ. 1998ರಿಂದ 2023ರವರೆಗೆ ಗೂಗಲ್‌ನ ಲೊಗೊ ಮತ್ತು ಕಾಲಕಾಲಕ್ಕೆ ಪ್ರಕಟಿಸುವ ಡೂಡಲ್‌ಗಳನ್ನು ತನ್ನ ಬ್ಲಾಗ್‌ನಲ್ಲಿ ಗೂಗಲ್ ಹಂಚಿಕೊಂಡಿದೆ.

ಸರ್ಗಿ ಬ್ರೈನ್ ಮತ್ತು ಲ್ಯಾರಿ ಪೇಜ್‌ ಅವರು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ 1997ರ ಜನವರಿಯಲ್ಲಿ ಮೊದಲ ಬಾರಿಗೆ ಭೇಟಿಯಾದರು. ಸರ್ಗಿ ಆಗಲೇ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ನಂತರ ಇಬ್ಬರೂ ಒಂದು ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುವ ಕುರಿತು ಜತೆಗೂಡಿ ಕೆಲಸ ಮಾಡಲು ಆರಂಭಿಸಿದರು. ಅದರಲ್ಲಿ ಯಶಸ್ವಿಯಾದ ಈ ಜೋಡಿ ಅದರ ಮಾದರಿಯನ್ನು ಸಿದ್ಧಪಡಿಸಿದರು. ಇದನ್ನು ವಿಸ್ತರಿಸಲು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆದಾರರನ್ನು ಸರ್ಗಿ ಮತ್ತು ಲ್ಯಾರಿ ಹುಡುಕಿದರು. ಸನ್ ಮೈಕ್ರೊಸಿಸ್ಟಮ್ಸ್‌ ಒಂದು ಲಕ್ಷ ಅಮೆರಿಕನ್ ಡಾಲರ್‌ ಅನ್ನು ಗೂಗಲ್‌ನಲ್ಲಿ ಹೂಡಿತು. ಹೀಗಾಗಿ 1998ರ ಸೆ. 27ರಂದು ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಅಧಿಕೃತವಾಗಿ ಆರಂಭಗೊಂಡಿತು.

ADVERTISEMENT

ಅಲ್ಲಿಂದ ಗೂಗಲ್‌ ಕೇವಲ ಸರ್ಚ್‌ ಎಂಜಿನ್ ಆಗಿಯಷ್ಟೇ ಉಳಿಯದೇ, ಇಮೇಲ್‌, ಯುಟ್ಯೂಬ್‌ನಿಂದ ಹಿಡಿದು ಸದ್ಯ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ಬೆಳೆದು ನಿಂತಿದೆ. ಆ್ಯಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಜಗತ್ತಿನ ಅತಿ ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಲ್ಲಿದೆ. ಹಾರ್ಡ್‌ವೇರ್‌ನಲ್ಲೂ ಕೈಯಾಡಿಸಿರುವ ಗೂಗಲ್‌ ಪಿಕ್ಸೆಲ್‌ ಮೂಲಕ ಮೊಬೈಲ್ ಕ್ಷೇತ್ರದಲ್ಲೂ ಸದ್ದು ಮಾಡುತ್ತಿದೆ.

ಸದ್ಯ 1.8 ಶತಕೋಟಿ ಜಿಮೇಲ್ ಬಳಕೆದಾರರು ಜಗತ್ತಿನಲ್ಲಿದ್ದಾರೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 22ರಷ್ಟಾಗಿದೆ. ಭಾರತದಲ್ಲಿರುವ ಅಂತರ್ಜಾಲ ಬಳಕೆದಾರರಲ್ಲಿ ಶೇ 80ರಷ್ಟು ಜನ ಗೂಗಲ್‌ ಬಳಸುತ್ತಿದ್ದಾರೆ. ಸದ್ಯ ಕಂಪನಿಯನ್ನು ಮುನ್ನಡೆಸುತ್ತಿರುವವರು ಭಾರತ ಮೂಲದ ಸುಂದರ್ ಪಿಚೈ.

ಜಗತ್ತಿನ 150ಕ್ಕೂ ಹೆಚ್ಚು ಭಾಷೆಗಳಲ್ಲಿ ನಿತ್ಯ ಹಲವು ವಿಷಯಗಳ ಕುರಿತ ಹುಡುಕಾಟ ಗೂಗಲ್‌ ಮೂಲಕವೇ ನಡೆಯುತ್ತಿದೆ. ಆರಂಭದಲ್ಲಿ ಆಟಿಕೆಗಳನ್ನು ಬಳಸಿ ಸಿದ್ಧಪಡಿಸಲಾದ ಕ್ಯಾಬಿನೇಟ್‌ನಲ್ಲಿ ಗೂಗಲ್‌ನ ಸರ್ವರ್‌ ಇಡಲಾಗಿತ್ತು. ಆದರೆ ಇಂದು ಜಗತ್ತಿನ 20 ಕಡೆಗಳಲ್ಲಿ ಗೂಗಲ್‌ ತನ್ನ ಮಾಹಿತಿ ಕೇಂದ್ರ ಹೊಂದಿದೆ. ಅಲ್ಲಿ ಬೃಹತ್ ಸರ್ವರ್‌ಗಳನ್ನು ಕಂಪನಿ ಹೊಂದಿದೆ. ಹೀಗಾಗಿ ಗೂಗಲ್‌ ಜಾಗತಿಕ ಮಟ್ಟದಲ್ಲಿ 1.78 ಲಕ್ಷ ನೌಕರರನ್ನು ಹೊಂದಿದೆ. 

ಪ್ರತಿನಿತ್ಯ 10 ಕೋಟಿ ಗಿಗಾಬೈಟ್‌ ಮಾಹಿತಿ ನೂರಾರು ಶತಕೋಟಿ ಆನ್‌ಲೈನ್ ಪೇಜ್‌ಗಳ ಮೂಲಕ ಹಂಚಿಕೆಯಾಗುತ್ತಿದೆ. ಇಂಥ ಗೂಗಲ್‌ ಕುರಿತ ಒಂದಷ್ಟು ಕುತೂಹಲಕರ ಅಂಶಗಳು ಇಲ್ಲಿವೆ.

  • ಮೊದಲ ಬಾರಿಗೆ ಭೇಟಿಯಾದ ಸರ್ಗಿ ಹಾಗೂ ಲ್ಯಾರಿ ಅವರ ನಡುವಿನ ಪ್ರತಿಯೊಂದು ಆಲೋಚನೆಗಳೂ ಭಿನ್ನವಾಗಿದ್ದವು. ಹೀಗಾಗಿ ಒಬ್ಬರ ಆಲೋಚನೆಗೆ ಮತ್ತೊಬ್ಬರ ಸಹಮತ ಇರುತ್ತಿರಲಿಲ್ಲ

  • ಗೂಗಲ್ ಸರ್ಚ್‌ ಎಂಜಿನ್‌ಗೆ ಮೊದಲು ಬ್ಯಾಕ್‌ರಬ್‌ ಎಂದು ಹೆಸರಿಡಲಾಗಿತ್ತು. ಲಭ್ಯವಿರುವ ಮಾಹಿತಿಯನ್ನು ವರ್ಲ್ಡ್‌ ವೈಡ್ ವೆಬ್‌ ಮೂಲಕ ನೀಡುವ ಕಾರಣದಿಂದ ಈ ಹೆಸರಿಡಲಾಗಿತ್ತು ಎನ್ನಲಾಗಿದೆ. ನಂತರ ಇದನ್ನು ಗೂಗಲ್ ಎಂದು ಬದಲಿಸಲಾಯಿತು.

  • ಗೂಗಲ್ ಎಂಬುದು 1ರಿಂದ 100 ಶೂನ್ಯಗಳನ್ನು ಹೊಂದಿದ ಒಂದು ಗಣಿತದ ಲೆಕ್ಕದ ಆಟವಾಗಿದೆ.

  • ಗೂಗಲ್‌.ಕಾಂ 1997ರ ಸೆ. 15ರಂದು ನೋಂದಣಿಯಾಗಿದೆ ಎಂದು ಐಸಿಎಎನ್‌ಎನ್‌ ದಾಖಲೆ ಹೇಳುತ್ತದೆ. ಆದರೆ ಗೂಗಲ್ ತನ್ನ ಜಾಲತಾಣವನ್ನು ಮೊದಲು ಲೋಕಾರ್ಪಣೆಗೊಳಿಸಿದ್ದು 1998ರಲ್ಲಿ.

  • ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್‌ನಲ್ಲಿ 1998ರಲ್ಲಿ ಗೂಗಲ್ ಮೊದಲ ಬಾರಿಗೆ ಆರಂಭಿಸಿದ ಕಚೇರಿಯು ಗೂಗಲ್‌ನ ನೌಕರರಾದ ಸುಸಾನ್ ಅವರಿಗೆ ಸೇರಿದ್ದಾಗಿತ್ತು. ನಂತರ ಅವರು ಯುಟ್ಯೂಬ್‌ನ ಸಿಇಒ ಆದರು. 

  • ಯೋಕ್ಷಾ ಎಂಬ ಕಂಪನಿಯ ಮೊದಲ ನಾಯಿಯನ್ನು ಗೂಗಲ್ ಪರಿಚಯಿಸಿತು. ಮೌಂಟೈನ್ ವ್ಯೂನಲ್ಲಿ ಗೂಗಲ್ ತನ್ನ ಹೊಸ ಕಚೇರಿ ಆರಂಭಿಸದಾಗ ಯೋಕ್ಷಾ ಅಲ್ಲಿಗೆ ಭೇಟಿ ನೀಡಿದ ಮೊದಲ ಶ್ವಾನವಾಗಿತ್ತು. ಇದು 2011ರಲ್ಲಿ ಮೃತಪಟ್ಟಿತು. ಅಲ್ಲಿರುವ ಕೆಫೆಗೆ ಯೋಕ್ಷಾ ಎಂಬ ಹೆಸರನ್ನೇ ಇಡಲಾಗಿದೆ.

  • 2006ರಲ್ಲಿ ಗೂಗಲ್‌ ಎಂಬುದು ಕ್ರಿಯಾಪದವಾಗಿ ಪದಕೋಶ ಸೇರಿದೆ. ಗೂಗಲ್‌ ಎಂದರೆ ಒಂದು ವಿಷಯ ಅಥವಾ ಒಬ್ಬ ವ್ಯಕ್ತಿಯ ಕುರಿತು ವರ್ಲ್ಡ್ ವೈಡ್ ವೆಬ್‌ನಲ್ಲಿ ಮಾಹಿತಿ ಬೇಕಾದಲ್ಲಿ ಗೂಗಲ್ ಸರ್ಚ್‌ ಎಂಜಿನ್‌ ಬಳಸಬಹುದು ಎಂದಿದೆ.

  • 2009ರ ಫೆ. 25ರಂದು ಗೂಗಲ್ ತನ್ನ ಮೊದಲ ಟ್ವೀಟ್ ಮಾಡಿತು. ಅದು ಬೈನರಿ (0 ಮತ್ತು 1) ಸಂಖ್ಯೆಯಲ್ಲಿತ್ತು. ಅದನ್ನು ಭಾಷಾಂತರಿಸಿದಾಗ ‘ಐ ಆ್ಯಮ್ ಫೀಲಿಂಗ್ ಲಕ್ಕಿ’ ಎಂದು ಬರೆದಿತ್ತು.

  • ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ಗೂಗಲ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.