ADVERTISEMENT

ಗೂಗಲ್‌ ಡೂಡಲ್‌ನಲ್ಲಿ ದೇಶದ ಮೊದಲ ಪದವೀಧರೆ ಕಾಮಿನಿ ರಾಯ್‌

ಮಹಿಳಾ ಹಕ್ಕುಗಳ ಹೋರಾಟಗಾರ್ತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 2:57 IST
Last Updated 12 ಅಕ್ಟೋಬರ್ 2019, 2:57 IST
ಗೂಗಲ್‌ ಡೂಡಲ್‌ನಲ್ಲಿ ಕಾಮಿನಿ ರಾಯ್‌
ಗೂಗಲ್‌ ಡೂಡಲ್‌ನಲ್ಲಿ ಕಾಮಿನಿ ರಾಯ್‌    

ಬೆಂಗಳೂರು: ಗೂಗಲ್‌ ಸರ್ಚ್ಇಂಜಿನ್‌ ಕವಿ, ಹೋರಾಟಗಾರ್ತಿ ಕಾಮಿನಿ ರಾಯ್‌ ಅವರ ಜನ್ಮದಿನವನ್ನು ಡೂಡಲ್‌ ಮೂಲಕ ಆಚರಿಸಿದೆ. ಬ್ರಿಟಿಷ್‌ ಭಾರತದಲ್ಲಿ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕಾಮಿನಿ ರಾಯ್‌ ಅವರದ್ದು.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬೆಂಗಾಲಿ ಕವಿ, ಶಿಕ್ಷಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡ ಕಾಮಿನಿ ರಾಯ್ ಅವರ 155ನೇ ಜನ್ಮದಿನೋತ್ಸವ. ದೇಶದಲ್ಲಿ ಮಹಿಳೆಯ ಹಕ್ಕುಗಳ ಪರವಾಗಿ ದನಿ ಎತ್ತಿದವರು ಹಾಗೂ ಸ್ತ್ರೀವಾದವನ್ನು ಪ್ರಚುರಪಡಿಸಿದವರಲ್ಲಿ ಕಾಮಿನಿ ಪ್ರಮುಖರು.

ಬೆಂಗಾಲ್‌ ಪ್ರಾಂತ್ಯದ ಬಕೇರ್‌ಗಂಜ್‌ ಜಿಲ್ಲೆಯಲ್ಲಿ 1864ರಲ್ಲಿ ಕಾಮಿನಿ ಅವರ ಜನನ. ಚಿಕ್ಕಂದಿನಲ್ಲಿ ಗಣಿತದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ನಂತರದಲ್ಲಿ ಸಂಸ್ಕೃತ ಅಭ್ಯಾಸದ ಕಡೆಗೆ ಒಲವು ಬೆಳೆಸಿಕೊಂಡರು. 1886ರಲ್ಲಿ ಬೆಥೂನ್‌ ಕಾಲೇಜಿನಲ್ಲಿ ಕಲಾ ವಿಭಾಗದ ಪದವಿ ಮತ್ತು ಭಾಷಾ ವಿಷಯದಲ್ಲಿ ಹಾನರ್ಸ್‌ ಪಡೆದರು. ಮುಂದೆ ಅದೇ ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು.

ADVERTISEMENT

ಚಿಕ್ಕಂದಿನಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರು 1889ರಲ್ಲಿ ತಮ್ಮ ಮೊದಲ ಕವನ ಸಂಕಲ (ಅಲೊ ಓ ಛಾಯಾ) ಪ್ರಕಟಿಸಿದರು. ಬೆಥೂನ್‌ ಕಾಲೇಜಿನಲ್ಲಿ ಸಂಪರ್ಕಕ್ಕೆ ಬಂದ ಅಬಾಲಾ ಬೋಸ್‌ ಜತೆಗೆ ಮಹಿಳಾ ಪರ ಚಟುವಟಿಕೆಗಳಲ್ಲಿ ಭಾಗಿಯಾದರು.

ಬೆಂಗಾಲದಲ್ಲಿ ಮಹಿಳೆಯರಿಗೆ ಮತದಾನ ಹಕ್ಕಿಗಾಗಿ ಕಾಮಿನಿ ಕಾರ್ಯಮುಖಿಯಾದರು. ಅವರ ಪ್ರಯತ್ನದಿಂದಾಗಿ 1926ರ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರು ಮತ ಚಲಾಯಿಸಿದರು. ಅವರು 1933ರಲ್ಲಿ ನಿಧನರಾದರು. ಕಲ್ಕತ್ತಾ ವಿಶ್ವವಿದ್ಯಾಲಯದ ಜಗತ್ತಾರಿಣಿ ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.