ADVERTISEMENT

ಕೇವಲ 10 ನಿಮಿಷದಲ್ಲಿ ಕಿರಾಣಿ: ಜೊಮಾಟೊದ ‘Grofers‘ಗೆ ಹಿಗ್ಗಾಮುಗ್ಗಾ ತರಾಟೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 9:51 IST
Last Updated 29 ಆಗಸ್ಟ್ 2021, 9:51 IST
ಗ್ರೊಪರ್ಸ್, ಸಾಂದರ್ಭಿಕ ಚಿತ್ರ
ಗ್ರೊಪರ್ಸ್, ಸಾಂದರ್ಭಿಕ ಚಿತ್ರ   

ಬೆಂಗಳೂರು: ಡಿಜಿಟಲ್ ಕ್ರಾಂತಿಯ ಪ್ರಭಾವದಿಂದ ಇತ್ತೀಚೆಗೆ ಎಲ್ಲವೂ ಆನ್‌ಲೈನ್ ಆಗುತ್ತಿರುವುದರಿಂದ ಬೆರಳ ತುದಿಯಲ್ಲೇ ಎಲ್ಲವೂ ಸಿಕ್ಕಬೇಕು ಎನ್ನುವ ಧಾವಂತ ಜನರಿಗೆ. ಇದಕ್ಕೆ ತಕ್ಕುದಾಗಿ ಕೂಡ ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರು ಕಂಪನಿಗಳು ಕೂಡ ಜನರಿಗೆ ಬಗೆ ಬಗೆಯ ಸೇವೆಯನ್ನು ಕ್ಷಣಾರ್ಧದಲ್ಲಿ ನೀಡಲು ಹಾತೊರಿಯುತ್ತಿವೆ.

ಆದರೆ, ಅತಿ ವೇಗ ಒಳ್ಳೆಯದಲ್ಲ. ಮನುಷ್ಯನಿಗೂ ಒಂದು ಇತಿ–ಮಿತಿ ಇರಬೇಕು ಎಂಬ ಮಾತುಗಳು ಈ ವೇಗದ ಸೇವೆ ನೀಡುವ ಕಂಪನಿಗಳ ಬಗ್ಗೆ ಆಗಾಗ ಕೇಳಿ ಬರುತ್ತಿವೆ. ಇಂತಹುದೇ ಸಂಗತಿ ಈಗ ಹೊಸ ಚರ್ಚೆಯನ್ನು ಹುಟ್ಟಿಹಾಕಿದೆ.

ಇತ್ತೀಚೆಗೆ ಪ್ರವರ್ಧಮಾನಕ್ಕ ಬರುತ್ತಿರುವ, ಜೊಮಾಟೊ ಒಡೆತನದ ಆನ್‌ಲೈನ್ ಕಿರಾಣಿ ಡೆಲಿವರಿ ಕಂಪನಿಯಾದ ಗ್ರೋಫರ್ಸ್ (Grofers) ತನ್ನ ಗ್ರಾಹಕರಿಗೆ ಅತ್ಯಂತ ತ್ವರಿತ ಸೇವೆ ನೀಡುತ್ತೇವೆ ಎಂದು ನೀಡಿದ ಜಾಹೀರಾತು ಇಂಟರ್‌ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ. ‘ನಾವು ನಮ್ಮ ಗ್ರಾಹಕರಿಗೆ ಕೇವಲ ಹತ್ತು ನಿಮಿಷದಲ್ಲಿ ಕಿರಾಣಿಯನ್ನು ತಲುಪಿಸುತ್ತೇವೆ‘ ಎಂದು ಕಂಪನಿ ವ್ಯಾಪಕ ಪ್ರಚಾರ ಮಾಡುತ್ತಿದೆ.

ADVERTISEMENT

ಇದು ಹಲವು ಗ್ರಾಹಕರನ್ನು ಕೆರಳಿಸಿದ್ದು, ಮನುಷ್ಯನಿಗೆ ಯಾವುದಕ್ಕೂ ಒಂದು ಮಿತಿ ಇರಬೇಕು. ಹತ್ತು ನಿಮಿಷದಲ್ಲಿ ಕಿರಾಣಿಯನ್ನು ಮನೆ ಮನೆಗೆ ತಲುಪಿಸುವುದು ತುಂಬಾ ಕಷ್ಟದ ಕೆಲಸ. ನೀವು ಡೆಲಿವರಿ ಬಾಯ್‌ಗಳ ಜೀವದೊಂದಿಗೆ ಆಟ ಆಡಲು ನೋಡುತ್ತಿದ್ದಿರಾ ಎಂದು ಕಂಪನಿಯನ್ನು ಟ್ವಿಟರ್‌ನಲ್ಲಿ ಹಲವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

‘ನನಗೆ 10–20 ನಿಮಿಷದಲ್ಲಿ ಕಿರಾಣಿ ತಲುಪಿಸುವುದು ಏನೂ ಬೇಕಾಗಿಲ್ಲ. ಡೆಲಿವರಿ ಬಾಯ್ ನಿಧಾನವಾಗಿಯೇ ತನ್ನ ಸುರಕ್ಷತೆಯನ್ನು ನೋಡಿಕೊಂಡು ನಮಗೆ ಕಿರಾಣಿ ವಸ್ತುಗಳನ್ನು ತಂದು ಕೊಡಲಿ. ಸ್ಪರ್ಧೆಗಾಗಿ ಡೆಲಿವರಿ ಬಾಯ್‌ಗಳ ಪ್ರಾಣದ ಜೊತೆ ಚೆಲ್ಲಾಟ ಆಡುವ ಆನ್‌ಲೈನ್ ಡೆಲಿವರಿ ಕಂಪನಿಗಳ ಈ ನಡೆಗೆ ನಾಚಿಕೆಯಾಗಬೇಕು‘ ಎಂದು ಪೂಜಾ ಪ್ರಸನ್ನ ಎನ್ನುವರು ಗ್ರೋಫರ್ಸ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಸಂಕೇತ್ ಡಾಂಗಿ ಎನ್ನುವರು, ‘ಗ್ರೊಪರ್ಸ್‌ ಸ್ಥಾಪಕರು ನಾವು 10 ನಿಮಿಷದಲ್ಲಿ ಡೆಲಿವರಿ ನೀಡುತ್ತೇವೆ ಎನ್ನುತ್ತಾರೆ. ಇದು ಕಂಪನಿಯ ಪ್ರಚಾರಕ್ಕೆ ಮಾಡುವ ತಂತ್ರ. ಕಿರಾಣಿಯೇನು ಔಷಧ ಅಲ್ಲ. ಕೆಲವು ನಿಮಿಷ ತಡವಾಗಿ ತಂದರೂ ನಡೆಯುತ್ತೆ. ಆದರೆ, ಡೆಲಿವರಿ ಬಾಯ್‌ಗಳ ಜೀವನದ ಜೊತೆ ಚೆಲ್ಲಾಟ ಏಕೆ?‘ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇನ್ನೂ ಕೆಲವರು ಗ್ರೋಫರ್ಸ್ ಕಂಪನಿಯ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ ಕೂಡ.

ನನಗೆ ನೋವಾಯಿತು

ಇನ್ನು, ಹತ್ತು ನಿಮಿಷದಲ್ಲಿ ಕಿರಾಣಿ ನೀಡುತ್ತೇವೆ ಎಂದು ಹೇಳಿದ್ದ ಗ್ರೋಫರ್ಸ್ ಕಂಪನಿ ಸ್ಥಾಪಕ ಅಲ್‌ಬಿಂದರ್ ದಿಂಡಸಾ ಅವರು, ‘ಕಟು ವಿಮರ್ಶೆಗಳಿಂದ ನನಗೆ ತೀವ್ರ ನೋವಾಗಿದೆ‘ ಎಂದು ಹೇಳಿಕೊಂಡಿದ್ದಾರೆ. ‘ಹೊಸ ಪ್ರಯತ್ನವನ್ನು ಜನ ಏಕೆ ಸ್ವಾಗತಿಸುವುದಿಲ್ಲ?‘ ಎಂದಿದ್ದಾರೆ. ಅಲ್ಲದೇ ಅವರು ತಾವು ಹೇಗೆ ಹತ್ತು ನಿಮಿಷದಲ್ಲಿ ಕಿರಾಣಿಯನ್ನು ತಲುಪಿಸುತ್ತೇವೆ ಎನ್ನುವುದನ್ನು ವಿವರಿಸುವ ಜಾಹೀರಾತನ್ನು ಹಂಚಿಕೊಂಡಿದ್ಧಾರೆ.

‘ನಮಗೆ ಧೈರ್ಯವಿರುವ ಹೆಚ್ಚು ಜನರು ಬೇಕು. ಅಂತಹ ಜನರನ್ನು ಕೆಳಕ್ಕೆ ಎಳೆಯುವವರು ಕಡಿಮೆ ಬೇಕು‘ ಎಂದುಅಲ್‌ಬಿಂದರ್ ದಿಂಡಸಾ ಹೇಳಿದ್ದಾರೆ.

ಅಂದಹಾಗೆ ಗ್ರೋಫರ್ಸ್ ಎಂಬ ಹೊಸ ಸ್ಟಾರ್ಟ್‌ ಅಪ್ ಕಂಪನಿ ಗುರುಗ್ರಾಮ್ ಮೂಲದ್ದಾಗಿದ್ದು, ದೆಹಲಿ, ನೋಯ್ಡಾ, ಬೆಂಗಳೂರು, ಗುರುಗ್ರಾಮ್ ಸೇರಿದಂತೆ ಇನ್ನಿತರ ನಗರಗಳಿಗೆ ಆನ್‌ಲೈನ್ ಕಿರಾಣಿ ಸೇವೆ ನೀಡುವ ಕೆಲಸ ಮಾಡುತ್ತಿದೆ. ಇದು 2013 ರಲ್ಲಿ ಅಲ್‌ಬಿಂದರ್ ದಿಂಡಸಾ ಅವರಿಂದ ಸ್ಥಾಪನೆಯಾಗಿದ್ದು, ಸದ್ಯ ಜೊಮಾಟೊ ಕಂಪನಿ ಇದನ್ನು ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.