ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಸರ್ಕಾರ ವಿಧಿಸಿರುವ ಕೋವಿಡ್ ನಿಯಮಗಳನ್ನು ಉಲ್ಲಂಘಿಸದೆ ಅದಿತಿ ದಾಸ್ -ಸಂದೀಪನ್ ಸರ್ಕಾರ್ ಜೋಡಿ ಆನ್‌ಲೈನ್ ಮೂಲಕ ಮದುವೆಯಾಗಲು ನಿರ್ಧರಿಸಿದೆ.
ಈ ಜೋಡಿಯ ಮದುವೆ ಜನವರಿ 24ರಂದು ನಿಶ್ಚಯವಾಗಿದೆ. ಆದರೆ, ಇವರು ಮದುವೆಯಾಗುತ್ತಿರುವುದು ಕಲ್ಯಾಣ ಮಂಟಪದಲ್ಲಿ ಅಲ್ಲ. ಬದಲಿಗೆ ಗೂಗಲ್ ಮೀಟ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಟುಂಬಸ್ಥರು ಮತ್ತು ಅತಿಥಿಗಳ ಸುರಕ್ಷತೆಯ ದೃಷ್ಟಿಯಿಂದ ಇದು ಸೂಕ್ತ ನಿರ್ಧಾರ ಎಂಬುದು ವಧು –ವರನ ಅಲೋಚನೆಯಾಗಿದೆ.
ಮದುವೆಯಲ್ಲಿ ಭಾಗವಹಿಸಲು ಈಗಾಗಲೇ 450 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಹೀಗೆ ಆನ್‌ಲೈನ್ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ ಅತಿಥಿಗಳ ವಿಳಾಸಕ್ಕೆ ಜೊಮ್ಯಾಟೊ ಮೂಲಕ ಊಟವನ್ನು ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
‘ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದೆವು. ಕೋವಿಡ್ ಸಾಂಕ್ರಾಮಿಕದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯೂ ಕೋವಿಡ್ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಆನ್‌ಲೈನ್ ಮೊರೆ ಹೋಗಿದ್ದೇವೆ’ ಎಂದು 28 ವರ್ಷದ ಸಂದೀಪನ್ ಸರ್ಕಾರ್ ಹೇಳಿದ್ದಾರೆ.
ಮದುವೆಯ ನೇರ ಪ್ರಸಾರವನ್ನು ಗೂಗಲ್ ಮೀಟ್ ಮೂಲಕ ವೀಕ್ಷಿಸಲು ಸೂಚಿಸಿದ್ದೇವೆ ಎಂದು ಸರ್ಕಾರ್ ಮಾಹಿತಿ ನೀಡಿದ್ದಾರೆ.
ಕೋವಿಡ್ ನಿರ್ಬಂಧಗಳ ಅನ್ವಯ ಮದುವೆ ಕಾರ್ಯಕ್ರಮದಲ್ಲಿ 100 ರಿಂದ 120 ಮಂದಿ ಭಾಗವಹಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಆನ್‌ಲೈನ್ ವೇದಿಕೆಯಲ್ಲಿ 300ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಮದುವೆಯ ಮುನ್ನಾದಿನ ಅತಿಥಿಗಳಿಗೆ ಪಾಸ್‌ವರ್ಡ್ ಅನ್ನು ಫಾರ್ವರ್ಡ್ ಮಾಡಲಾಗುತ್ತದೆ ಎಂದು ಸರ್ಕಾರ್ ಹೇಳಿದ್ದಾರೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.