ಅಹಮದಾಬಾದ್: ಗುಜರಾತ್ ರಾಜ್ಯದಲ್ಲಿ ಯುವತಿಯೊಬ್ಬರು ತನ್ನನ್ನು ತಾನೇ (ಸ್ವಯಂ ಮದುವೆ) ವಿವಾಹವಾಗಲಿದ್ದಾರೆ. ಈ ರೀತಿ ಮದುವೆಯಾಗುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ.
ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಕ್ಷಮಾ ಬಿಂದು ಜೂನ್ 11ರಂದು ಸ್ವಯಂ ವಿವಾಹವಾಗಲಿದ್ದಾರೆ. ಮದುವೆಗಾಗಿ ಅವರ ಕುಟುಂಬ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದೆ. ವಡೋದರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯು ಗುಜರಾತಿ ಸಂಪ್ರದಾಯದ ಪ್ರಕಾರವಾಗಿ ಜರುಗಲಿದೆ.
ಆರತಕ್ಷತೆ, ಮೆಹಂದಿ ಸೇರಿದಂತೆ ಮುಹೂರ್ತ ಕೂಡ ನಡೆಯಲಿದೆ. ಯುವತಿಯು ತನ್ನಷ್ಟಕ್ಕೆ ತಾನೇ ಮಾಂಗಲ್ಯ ಕಟ್ಟಿಕೊಳ್ಳಲಿದ್ದಾರೆ. ನಂತರ ಮಧುಚಂದ್ರಕ್ಕೆ ಗೋವಾಗೆ ತೆರಳಲಿದ್ದಾರೆ ಎಂದು ಕ್ಷಮಾ ಬಿಂದು ಕುಟುಂಬದವರು ಹೇಳಿದ್ದಾರೆ.
ಮದುವೆ ಬಗ್ಗೆ ಕ್ಷಮಾ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನನಗೆ ವರನೊಂದಿಗೆ ವಿವಾಹವಾಗುವುದು ಇಷ್ಟವಿಲ್ಲ, ನಾನು ಜೀವನ ಪೂರ್ತಿ ಏಕಾಂಗಿಯಾಗಿರಬೇಕು ಎಂದು ಬಯಸಿರುವೆ. ಭಾರತದಲ್ಲಿ ಇಲ್ಲಿಯವರೆಗೂ ಯಾರೂ ಕೂಡ ಸ್ವಯಂ ಮದುವೆಯಾಗಿಲ್ಲ, ಇದೇ ನನ್ನ ಮೊದಲ ವಿವಾಹ ಎಂದು ಕ್ಷಮಾ ಹೇಳಿದ್ದಾರೆ.
ವಡೋದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕ್ಷಮಾ ಕೆಲಸ ಮಾಡುತ್ತಿದ್ದಾರೆ. ಅವರ ಸ್ವಯಂ ಮದುವೆಗೆ ಕುಟುಂಬದವರ ಒಪ್ಪಿಗೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.