ಬಾರಿ (ಇಟಲಿ): ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಾಕಷ್ಟು ಹಂಚಿಕೆಯಾಗಿದೆ.
ಇಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರು ಮತ್ತೊಮ್ಮೆ ಸೆಲ್ಫಿ ಕ್ಲಿಕ್ಕಿಸಿಕೊಂಡು ‘ಮೆಲೋಡಿ ಕ್ಷಣ’ಕ್ಕೆ ಸಾಕ್ಷಿಯಾಗಿದ್ದಾರೆ.
ಮೋದಿ ಜತೆಗಿನ ಸೆಲ್ಫಿ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು 'Hi friends, from #Melodi' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ವೀಕ್ಷಿಸಿರುವ ನೆಟ್ಟಿಗರು, ಹಲವು ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ‘ಮೆಲೋಡಿ’ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದ್ದು, ಈವರೆಗೆ 1.13 ಕೋಟಿ ಜನರು ವಿಡಿಯೊ ವೀಕ್ಷಿಸಿದ್ದಾರೆ. ಇದು ನಿರೀಕ್ಷಿಸಲಾಗಿತ್ತು, ಇಬ್ಬರು ಕೂಲ್ ರಾಜಕಾರಣಿಗಳು, ಮೋದಿ ಜೀ ಈ ರೀತಿ ನಗುವುದನ್ನು ನೋಡಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಇಟಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿ ಹಿಂತಿರುಗಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಅವರು ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿದೆ.
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ನಡುವೆ ಉತ್ತಮ ಬಾಂಧವ್ಯ ಇರುವುದು ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ವರ್ಷದ ದುಬೈನಲ್ಲಿ ನಡೆದ ‘ಸಿಒಪಿ 28’ ಹವಾಮಾನ ಶೃಂಗಸಭೆಯಲ್ಲಿ ಈ ಸೆಲ್ಫಿ ಕ್ಲಿಕ್ಕಿಸಲಾಗಿತ್ತು. ಕ್ಲೋಸ್ಅಪ್‌ನ ಈ ಸೆಲ್ಫಿಯಲ್ಲಿ ಉಭಯತ್ರರು ಮೊಗದಲ್ಲಿ ನಗುವನ್ನು ತುಂಬಿಕೊಂಡಿದ್ದರು. ಉಭಯ ನಾಯಕರ ಉಪನಾಮ ಧ್ವನಿಸುವ ‘ಮೆಲೋಡಿ’ ಹ್ಯಾಷ್‌ಟ್ಯಾಗ್ ಜೊತೆಗೆ ಇದು ಹಂಚಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.