ADVERTISEMENT

ಇಡ್ಲಿ ಸ್ಯಾಂಡ್‌ವಿಚ್‌ಗೆ ಆಹಾರಪ್ರಿಯರು ಗರಂ: 'ಇಡ್ಲಿ ರಕ್ಷಿಸಿ ಅಭಿಯಾನ'ಕ್ಕೆ ಕರೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2024, 13:34 IST
Last Updated 17 ಅಕ್ಟೋಬರ್ 2024, 13:34 IST
   

ಪಾತ್ರೆಯಲ್ಲಿಟ್ಟು ಅಬೆಯಲ್ಲಿ ಬೇಯಿಸಿ ಮಾಡುವ 'ಇಡ್ಲಿ' ದಕ್ಷಿಣ ಭಾರತದ ಪ್ರಮುಖ ಆಹಾರವಾಗಿದೆ. ಸಾಂಬಾರ್‌ ಅಥವಾ ಚಟ್ನಿ ಜೊತೆ ಸವಿಯಬಹುದಾದ ಇವನ್ನು, ತಟ್ಟೆ ಇಡ್ಲಿ, ಪೋಡಿ ಇಡ್ಲಿ, ಮಿನಿ ಇಡ್ಲಿ, ರವಾ ಇಡ್ಲಿ ಎಂಬಿತ್ಯಾದಿ ಹಲವು ವಿಧಗಳಲ್ಲಿ ತಯಾರಿಸಲಾಗುತ್ತದೆ.

ಆ ಪಟ್ಟಿಗೆ ಹೊಸ ಸೇರ್ಪಡೆ 'ಇಡ್ಲಿ ಸ್ಯಾಂಡ್‌ವಿಚ್‌'.

ರಸ್ತೆ ಬದಿ ವ್ಯಾಪಾರಿಯೊಬ್ಬ 'ಇಡ್ಲಿ ಸ್ಯಾಂಡ್‌ವಿಚ್‌' ತಯಾರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ADVERTISEMENT

ವಿಡಿಯೊದಲ್ಲಿರುವ ವ್ಯಕ್ತಿಯು, ಇಡ್ಲಿಯ ಮೇಲೆ ಆಲೂಗಡ್ಡೆಯಿಂದ ತಯಾರಿಸಿದ ಪಲ್ಯವನ್ನು ಹಾಕಿ, ಅದರ ಮೇಲೆ ಮತ್ತೊಂದು ಇಡ್ಲಿಯನ್ನಿಡುತ್ತಾನೆ. ನಂತರ ಅವನ್ನು ಕಡಲೆಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯುತ್ತಾನೆ. ಬಳಿಕ ಅದರೊಂದಿಗೆ ಸಾಂಬಾರ್‌ ಹಾಗೂ ಚಟ್ನಿ ಸೇರಿಸಿ ಗ್ರಾಹಕರಿಗೆ ಬಡಿಸುತ್ತಾನೆ.

ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ರೋಹನ್‌ ಶಾ ಎಂಬವರು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 'ಇವರು ಇಡ್ಲಿ ಜೊತೆಗೆ ತುಂಬಾ ದೂರ ಹೋಗಿದ್ದಾರೆಯೇ?' ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

ವಿಡಿಯೊಗೆ ಪ್ರತಿಕ್ರಿಯಿಸಿರುವ ಹಲವರು ರೆಸಿಪಿ ಬಗ್ಗೆ ಕಳವಳ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೊಬ್ಬರು, 'ಆರೋಗ್ಯಕರ ಆಹಾರವನ್ನು ಅನಾರೋಗ್ಯಕರವಾಗಿಸುವುದನ್ನು ಇವರನ್ನು ನೋಡಿ ಕಲಿಯಿರಿ' ಎಂದು ಕುಟುಕಿದ್ದಾರೆ.

ಮತ್ತೊಬ್ಬರು, 'ಇಡ್ಲಿ ಬಚಾವೊ ಆಂದೋಲನ'ಕ್ಕೆ (ಇಡ್ಲಿ ರಕ್ಷಿಸಿ ಅಭಿಯಾನ) ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇನ್ನೊಬ್ಬರು, 'ನಿಮ್ಮ ಅಭಿಯಾನವನ್ನು ಬೆಂಬಲಿಸುತ್ತೇನೆ. ಆದರೆ, ಇಡ್ಲಿ ಮೇಲಿನ ಶೋಷಣೆಯಿಂದ ಬೇಸರವಾಗಿದೆ' ಎಂದಿದ್ದಾರೆ.

ಇನ್ನೊಬ್ಬ ನೆಟ್ಟಿಗ, 'ದಕ್ಷಿಣ ಭಾರತೀಯರು ಈ ಪುಟದ ಅಡ್ಮಿನ್‌ಗಾಗಿ ಹುಡುಕಾಡುತ್ತಿದ್ದಾರೆ' ಎಂದು ಚಟಾಕಿ ಹಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.