ನವದೆಹಲಿ: ಜಾಗತಿಕ ಮಟ್ಟದಲ್ಲಿ ಮೆಟಾ ಪ್ಲಾಟ್‌ಫಾರ್ಮ್ಸ್ ಕಂಪನಿಯ ‘ಥ್ರೆಡ್ಸ್’ ಮೈಕ್ರೊಬ್ಲಾಗಿಂಗ್ ಆ್ಯಪ್‌ನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆಯು 17.5 ಕೋಟಿ ಮುಟ್ಟಿದೆ.
ಟ್ವಿಟರ್‌ಗೆ (ಈಗಿನ ‘ಎಕ್ಸ್’) ಪ್ರತಿಸ್ಪರ್ಧಿಯಾಗಿ ಒಂದು ವರ್ಷದ ಹಿಂದೆ ಮೆಟಾ ಕಂಪನಿಯು ಈ ಆ್ಯಪ್ ಅನ್ನು ಬಿಡುಗಡೆಗೊಳಿಸಿತ್ತು. ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.
ಬಳಕೆದಾರರ ಆಲೋಚನೆ ಹಾಗೂ ಯೋಜನೆಗಳನ್ನು ಹಂಚಿಕೊಳ್ಳಲು ಥ್ರೆಡ್ಸ್ ಉತ್ತಮ ವೇದಿಕೆಯಾಗಿದೆ. ಸಕ್ರಿಯ ಬಳಕೆದಾರರು ಹೆಚ್ಚಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಇಲ್ಲಿನ ಬಳಕೆದಾರರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದೆ.
ಭಾರತದಲ್ಲಿ ಸಿನಿಮಾ, ಟಿ.ವಿ, ಒಟಿಟಿ, ಕ್ರಿಕೆಟ್ ತಾರೆಯರ ಕುರಿತ ಸಂಭಾಷಣೆಯು ಜನಪ್ರಿಯ ಟ್ಯಾಗ್ ಮತ್ತು ವಿಷಯಗಳಾಗಿವೆ. ಜಾಗತಿಕ ಮಟ್ಟದಲ್ಲಿ ಇಲ್ಲಿಯವರೆಗೆ 50 ದಶಲಕ್ಷ ವಿಷಯಗಳ ಟ್ಯಾಗ್ ಸೃಷ್ಟಿಯಾಗಿದೆ ಎಂದು ವಿವರಿಸಿದೆ.
‘ಭಾರತದಲ್ಲಿ ಕ್ರಿಕೆಟ್ ವಿಷಯಗಳು ಹೆಚ್ಚು ಚರ್ಚಿತವಾಗಿವೆ. ಕ್ರಿಕೆಟಿಗರಾದ ರಿಷಭ್ ಪಂತ್, ರವೀಂದ್ರ ಜಡೇಜಾ, ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಸುರೇಶ್ ರೈನಾ, ಎ.ಬಿ ಡೆವಿಲಿಯರ್, ನಿರೂಪಕಿ ಇಧಿಮಾ ಪಾಠಕ್ ಅವರು, ಕ್ರಿಕೆಟ್ ಬಗೆಗಿನ ತಮ್ಮ ಅಭಿರುಚಿಯನ್ನು ಥ್ರೆಡ್ಸ್‌ನಲ್ಲಿ ಹಂಚಿಕೊಂಡಿದ್ದಾರೆ’ ಎಂದು ಹೇಳಿದೆ.
ಪ್ರಸಕ್ತ ವರ್ಷದಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್, ಐಪಿಎಲ್, ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಬಹುಚರ್ಚಿತ ವಿಷಯಗಳಾಗಿವೆ. 200ಕ್ಕೂ ಹೆಚ್ಚು ಬಳಕೆದಾರರು ಐಪಿಎಲ್ ಕ್ರಿಕೆಟ್ ಟೂರ್ನಿಯ ಫೈನಲ್ ಬಗೆಗಿನ ಕ್ಷಣ ಕ್ಷಣದ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.