ನವದೆಹಲಿ: ಖಾಸಗಿತನಕ್ಕೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ನೀತಿಯಲ್ಲಿ ಇತ್ತೀಚೆಗೆ ತಂದಿರುವ ಬದಲಾವಣೆಗಳು ಏಕಪಕ್ಷೀಯವಾಗಿದ್ದು, ಅವು ಸ್ವೀಕಾರಾರ್ಹವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನೀತಿಗಳಲ್ಲಿನ ಬದಲಾವಣೆಗಳನ್ನು ಕೈಬಿಡುವಂತೆ ಕೇಂದ್ರವು ವಾಟ್ಸ್ ಆ್ಯಪ್‌ಗೆ ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸ್ ಆ್ಯಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್ ಅವರಿಗೆ ಪತ್ರ ಬರೆದಿದ್ದು, ‘ಜಾಗತಿಕ ಮಟ್ಟದಲ್ಲಿ ಭಾರತವು ವಾಟ್ಸ್ ಆ್ಯಪ್‌ನ ಅತಿದೊಡ್ಡ ಬಳಕೆದಾರ ಆಗಿದ್ದು, ವಾಟ್ಸ್ ಆ್ಯಪ್ ಸೇವೆಗಳಿಗೆ ಅತಿದೊಡ್ಡ ಮಾರುಕಟ್ಟೆಯೂ ಆಗಿದೆ’ ಎಂದು ಹೇಳಿದೆ.
ಹೊಸ ನೀತಿಯು ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿಲ್ಲ. ಇದರಿಂದಾಗಿ ಭಾರತೀಯರ ಆಯ್ಕೆ ಮತ್ತು ಸ್ವಾಯತ್ತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಕಳವಳ ಮೂಡಿದೆ. ಹೀಗಾಗಿ ಪ್ರಸ್ತಾವಿತ ಬದಲಾವಣೆಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮಾಹಿತಿಯ ಗೋಪ್ಯತೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ದತ್ತಾಂಶದ ಸುರಕ್ಷತೆಯನ್ನು ಪರಿಗಣಿಸಬೇಕು ಎಂದು ಸಚಿವಾಲಯವು ಪತ್ರದಲ್ಲಿ ಹೇಳಿದೆ.
ಮಾತೃಸಂಸ್ಥೆ ಫೇಸ್‌ಬುಕ್ ಜೊತೆ ಬಳಕೆದಾರರ ದತ್ತಾಂಶ ಮತ್ತು ಮಾಹಿತಿ ಹಂಚಿಕೊಳ್ಳುವ ಕುರಿತಾದ ಹೊಸ ನಿಯಮವನ್ನು ಫೆಬ್ರುವರಿ 8ರಿಂದ ಜಾರಿಗೆ ತರುವುದಾಗಿ ವಾಟ್ಸ್ ಆ್ಯಪ್ ಹೇಳಿತ್ತು. ಅದಕ್ಕೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಾರಿ ದಿನಾಂಕವನ್ನು ಮೇ 15ಕ್ಕೆ ಮುಂದೂಡಿರುವುದಾಗಿ ಘೋಷಿಸಿದೆ.
ಭಾರತದಲ್ಲಿ ನೀಡುತ್ತಿರುವ ಸೇವೆಗಳ ಸಂಪೂರ್ಣ ವಿವರ ನೀಡುವಂತೆ ಸಚಿವಾಲಯವು ವಾಟ್ಸ್ ಆ್ಯಪ್ ಅನ್ನು ಕೇಳಿದೆ. ಯಾವೆಲ್ಲ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ, ಅನುಮತಿಗಳನ್ನು ಪಡೆದುಕೊಳ್ಳಲಾಗುತ್ತಿದೆ ಎನ್ನುವುದನ್ನು ತಿಳಿಸುವಂತೆಯೂ ಹೇಳಿದೆ.
ಭಾರತದಲ್ಲಿ ವಾಟ್ಸ್ ಆ್ಯಪ್ ಬಳಸುತ್ತಿರುವವರನ್ನು, ಬಳಕೆಯ ಮಾಹಿತಿಯ ಆಧಾರದಲ್ಲಿ ವರ್ಗೀಕರಣ ಮಾಡುತ್ತಿದ್ದರೆ ಆ ಕುರಿತು ವಿವರಣೆ ನೀಡುವಂತೆ ಕೇಳಿದೆ. ಭಾರತದಲ್ಲಿ ಮತ್ತು ಇತರೆ ದೇಶಗಳಲ್ಲಿ ಜಾರಿಯಲ್ಲಿ ಇರುವ ಖಾಸಗಿತನಕ್ಕೆ ಸಂಬಂಧಿಸಿದ ನೀತಿ ನಡುವೆ ಇರುವ ವ್ಯತ್ಯಾಸದ ಬಗ್ಗೆಯೂ ತಿಳಿಸುವಂತೆ ಪತ್ರದಲ್ಲಿ ಕೇಳಲಾಗಿದೆ.
ದತ್ತಾಂಶ ಮತ್ತು ಮಾಹಿತಿ ಸುರಕ್ಷತೆ, ಖಾಸಗಿತನ ಹಾಗೂ ಎನ್‌ಕ್ರಿಪ್ಶನ್ ಕುರಿತಾಗಿಯೂ ತನ್ನ ನೀತಿಯನ್ನು ತಿಳಿಸುವಂತೆ ಹೇಳಿದೆ.
ಇದನ್ನೂ ಓದಿ:ಸಿಗ್ನಲ್ ಆ್ಯಪ್: ಖಾಸಗಿತನ ಸುರಕ್ಷಿತವೇ?
ಬೇರೆ ಆ್ಯಪ್‌ಗಳೊಂದಿಗೆ ದತ್ತಾಂಶ ಹಂಚಿಕೆ ಮಾಡುತ್ತಿರುವ ವಿವರ ಹಾಗೂ ಮೊಬೈಲ್‌ನಲ್ಲಿ ಇರುವ ಬೇರೆ ಆ್ಯಪ್‌ಗಳ ಮಾಹಿತಿಯನ್ನು ಪೆಡಯುತ್ತಿದ್ದರೆ ಅದರ ಮಾಹಿತಿಯನ್ನೂ ನೀಡುವಂತೆ ಕೇಳಿದೆ.
ಬಳಕೆದಾರರ ಸಮಯ, ಫ್ರೀಕ್ವೆನ್ಸಿ ಮತ್ತು ಸಂವಹನದ ಅವಧಿ, ಗ್ರೂಪ್‌ನ ಹೆಸರು, ಪಾವತಿಗಳು ಮತ್ತು ವಹಿವಾಟಿನ ಮಾಹಿತಿಗಳು, ಆನ್‌ಲೈನ್ ಸ್ಟೇಟಸ್, ಲೊಕೇಷನ್ ಇಂಡಿಕೇಟರ್ಸ್ ಹಾಗೂ ಬಿಸಿನೆಸ್ ಅಕೌಂಟ್ ಜೊತೆಗೆ ಹಂಚಿಕೊಂಡ ಯಾವುದೇ ಮೆಸೇಜ್ ಅನ್ನು ವಾಟ್ಸ್ ಆ್ಯಪ‍್ ಸಂಗ್ರಹಿಸಲು ಪರಿಷ್ಕರಿಸಿದ ನಿಯಮವು ಅವಕಾಶ ಒದಗಿಸಿಕೊಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.