ADVERTISEMENT

ಭಾರತ ಸರ್ಕಾರ ಟ್ವಿಟರ್‌ ಅನ್ನು ಬಂದ್‌ ಮಾಡುವ ಬೆದರಿಕೆ ಹಾಕಿತ್ತು: ಮಾಜಿ ಸಿಇಒ ಡಾರ್ಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2023, 9:45 IST
Last Updated 13 ಜೂನ್ 2023, 9:45 IST
 ಜಾಕ್‌ ಡಾರ್ಸಿ
ಜಾಕ್‌ ಡಾರ್ಸಿ   

ನವದೆಹಲಿ: ರೈತರ ಪ್ರತಿಭಟನೆಯನ್ನು ವರದಿ ಮಾಡುವ ಹಾಗೂ ಸರ್ಕಾರವನ್ನು ಟೀಕೆ ಮಾಡುವ ಖಾತೆಗಳನ್ನು ತಡೆಹಿಡಿಯಬೇಕು ಎಂದು ಭಾರತ ಸರ್ಕಾರದಿಂದ ಹಲವು ಮನವಿಗಳು ಬಂದಿದ್ದವು ಎಂದು ಟ್ವಿಟರ್‌ನ ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್‌ ಡೋರ್ಸಿ ಹೇಳಿದ್ದಾರೆ.

ಅಲ್ಲದೇ ಭಾರತದಲ್ಲಿ ಟ್ವಿಟರ್‌ ಅನ್ನು ಬಂದ್‌ ಮಾಡುವುದಾಗಿಯೂ, ಉದ್ಯೋಗಿಗಳ ಮನೆಗಳಿಗೆ ದಾಳಿ ನಡೆಸುವುದಾಗಿಯೂ ಬೆದರಿಕೆ ಹಾಕಲಾಗಿತ್ತು ಎಂದು ಅವರು ಹೇಳಿದ್ದಾರೆ.

ಯೂಟ್ಯೂಬ್‌ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಅವರು ಮಾತನಾಡಿದ್ದಾರೆ.

ADVERTISEMENT

ತಾವು ಸಿಇಒ ಆಗಿದ್ದ ವೇಳೆ ವಿದೇಶಿ ಸರ್ಕಾರಗಳಿಂದ ಒತ್ತಡ ಇತ್ತೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ ರೈತರ ಹೋರಾಟದ ಬಗ್ಗೆ ವರದಿ ಮಾಡುತ್ತಿದ್ದ ಖಾತೆಗಳು ಹಾಗೂ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಪತ್ರಕರ್ತರ ಖಾತೆಗಳನ್ನು ತಡೆಹಿಡಿಯಬೇಕು ಎಂದು ಭಾರತ ಸರ್ಕಾರದಿಂದ ಮನವಿಗಳು ಬಂದಿದ್ದವು. ನಾವು ಭಾರತದಲ್ಲಿ ಟ್ವಿಟರ್‌ ಅನ್ನು ಮುಚ್ಚುತ್ತೇವೆ ಎನ್ನುವ ಬೆದರಿಕೆ ಕೂಡ ಬಂದಿತ್ತು. ನಿಮ್ಮ ಉದ್ಯೋಗಿಗಳ ಮನೆಗೆ ದಾಳಿ ಮಾಡುತ್ತೇವೆ. ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ ಕಚೇರಿಗಳನ್ನು ಬಂದ್‌ ಮಾಡುತ್ತೇವೆ ಎಂದು ಹೇಳಿತ್ತು. ಇದು ಭಾರತ, ‍ಪ್ರಜಾತಂತ್ರ ರಾಷ್ಟ್ರ‘ ಎಂದು ಡೋರ್ಸಿ ಹೇಳಿದ್ದಾರೆ.

2021ರಲ್ಲಿ ರೈತರ ಹೋರಾಟ ತೀವ್ರವಾಗಿತ್ತು. ಈ ವೇಳೆ ಖಾಲಿಸ್ತಾನ್‌ ನಂಟು ಇದೆ ಎಂದು 1200 ಖಾತೆಗಳನ್ನು ತಡೆಹಿಡಿಯಬೇಕು ಎಂದು ಭಾರತ ಸರ್ಕಾರ ಮನವಿ ಮಾಡಿತ್ತು. ಇದಕ್ಕೂ ಮುನ್ನ 250 ಖಾತೆಗಳನ್ನು ತಡೆಹಿಡಿಯಲಾಗಿತ್ತು ಎಂದು ಅವರು ಹೇಳಿದ್ದಾರೆ.

ಕೆಲವೊಂದು ಖಾತೆಗಳನ್ನು ಟ್ವಿಟರ್‌ ಅನ್‌ಬ್ಲಾಕ್‌ ಮಾಡಿದ್ದು, ಭಾರತದ ಐಟಿ ಸಚಿವಾಲಯಕ್ಕೆ ಕಿರಿಕಿರಿ ಉಂಟು ಮಾಡಿತ್ತು. ಟ್ವಿಟರ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದರಿಂದ ಹಲವು ಖಾತೆಗಳನ್ನು ನಾವು ಬ್ಲಾಕ್‌ ಮಾಡಿರಲಿಲ್ಲ. ಹೀಗಾಗಿ ಸರ್ಕಾರದೊಂದಿಗೆ ನಮ್ಮ ಸಂಬಂಧ ಸರಿ ಹೋಗಲಿಲ್ಲ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.