ನವದೆಹಲಿ: ವಾಟ್ಸ್ ಆ್ಯಪ್ ನೀತಿಯಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಸ್ತಾಪಿಸಲಾಗಿರುವ ಬದಲಾವಣೆಗಳ ಕುರಿತು ಸಂಸದೀಯ ಸಮಿತಿಯ ಸದಸ್ಯರು ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಎದುರು ವಾಟ್ಸ್‌ಆ್ಯಪ್‌ನ ಪ್ರತಿನಿಧಿ ಹಾಜರಾಗಿದ್ದು, 'ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಪ್ರಸ್ತಾಪಿಸಲಾಗಿದೆ. ವಾಟ್ಸ್‌ಆ್ಯಪ್ ಚಾಟ್ ಹಾಗೂ ಕರೆಗಳು ಆಗಲೂ ಎಂಡ್–ಟು–ಎಂಡ್ ಎನ್‌ಕ್ರಿಪ್ಟೆಡ್ (ಬೇರೆಯವರು ಸಂದೇಶ ನೋಡಲು ಆಗುವುದಿಲ್ಲ) ಆಗಿರಲಿದೆ ಎಂದಿದ್ದಾರೆ.
ಭಾರತೀಯ ಬಳಕೆದಾರರಿಗೆ ಅನುಕೂಲಕರವಲ್ಲದ ಬದಲಾವಣೆಗಳನ್ನು ಪ್ರಸ್ತಾಪಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ವಾಟ್ಸ್‌ಆ್ಯಪ್, ನುಣಿಚಿಕೊಳ್ಳುವ ರೀತಿಯಲ್ಲಿ ಉತ್ತರಿಸಿದೆ. 'ಅವರಿಂದ ಸರಿಯಾದ ಉತ್ತರವೇ ಇಲ್ಲ' ಎಂದು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.
ದತ್ತಾಂಶವನ್ನು ಹಣಗಳಿಕೆಗಾಗಿ ಬಳಸಿಕೊಳ್ಳುವುದರ ಬಗ್ಗೆ ಕಂಪನಿಯ ಪ್ರತಿನಿಧಿ ಖಚಿತಪಡಿಸಿದ್ದಾರೆ ಎಂದಿದ್ದಾರೆ.
ಫೇಸ್‌ಬುಕ್, ಟ್ವಿಟರ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಸಮಿತಿಯು ಪ್ರತ್ಯೇಕವಾಗಿ ಮಾತುಕತೆ ನಡೆಸಿದೆ.
ಚರ್ಚೆಯ ಬಳಿಕ ವಾಟ್ಸ್‌ಆ್ಯಪ್ ವಕ್ತಾರರು ಪ್ರಕಟಣೆಯಲ್ಲಿ 'ಗೌರವಾನ್ವಿತ ಸಂಸದೀಯ ಸಮಿತಿಯ ಎದುರು ಹಾಜರಾಗಿ ನಮ್ಮ ನಿಲುವುಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂಬರುವ ದಿನಗಳಲ್ಲಿಯೂ ಸಮಿತಿಯೊಂದಿಗೆ ಸಹಕರಿಸಲು ಬಯಸುತ್ತೇವೆ' ಎಂದು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸ್ ಆ್ಯಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್ ಅವರಿಗೆ ಪತ್ರ ಬರೆದು, 'ಹೊಸ ನೀತಿಯು ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿಲ್ಲ. ಇದರಿಂದಾಗಿ ಭಾರತೀಯರ ಆಯ್ಕೆ ಮತ್ತು ಸ್ವಾಯತ್ತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಕಳವಳ ಮೂಡಿದೆ. ಹೀಗಾಗಿ ಪ್ರಸ್ತಾವಿತ ಬದಲಾವಣೆಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮಾಹಿತಿಯ ಗೋಪ್ಯತೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ದತ್ತಾಂಶದ ಸುರಕ್ಷತೆಯನ್ನು ಪರಿಗಣಿಸಬೇಕು' ಎಂದು ಹೇಳಿತ್ತು.
ನೀತಿಯಲ್ಲಿನ ಬದಲಾವಣೆಗಳು 40 ಕೋಟಿ ಬಳಕೆದಾರರಿರುವ ಭಾರತ ದೇಶದ ನಾಗರಿಕರ ಮೇಲೆ ಸೂಕ್ತವಲ್ಲದ ರೀತಿಯಲ್ಲಿ ಪರಿಣಾಮ ಬೀರಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಜನವರಿ ಆರಂಭದಲ್ಲಿ ವಾಟ್ಸ್‌ಆ್ಯಪ್ ತನ್ನ 200 ಕೋಟಿ ಬಳಕೆದಾರರಿಗೆ ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನೀತಿಗೆ ಸಮ್ಮತಿಸುವಂತೆ ಕೇಳಿತ್ತು. ವಾಟ್ಸ್‌ಆ್ಯಪ್ ಬಳಕೆದಾರರ ದತ್ತಾಂಶವನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ಉದ್ದೇಶವನ್ನು ಬದಲಾವಣೆ ತರಲಾಗಿರುವ ನೀತಿಯು ಒಳಗೊಂಡಿದೆ. ವಾಟ್ಸ್ ಆ್ಯಪ್‌ನ ಪ್ರಸ್ತಾಪಿತ ನೀತಿಯ ಬಗ್ಗೆ ಜಾಗತಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅದನ್ನು ಜಾರಿಗೆ ತರುವ ದಿನಾಂಕವನ್ನು ಮೇ 15ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.