ADVERTISEMENT

‘ಕೂ’ ಷೇರು ಖರೀದಿಸಿದ ಜಾವಗಲ್ ಶ್ರೀನಾಥ್, ಕಲ್ಯಾಣ್ ಕೃಷ್ಣಮೂರ್ತಿ

ಪಿಟಿಐ
Published 17 ಮಾರ್ಚ್ 2021, 19:30 IST
Last Updated 17 ಮಾರ್ಚ್ 2021, 19:30 IST
ಕೂ ಆ್ಯಪ್‌–ಸಾಂದರ್ಭಿಕ ಚಿತ್ರ
ಕೂ ಆ್ಯಪ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೂ’ ಸಾಮಾಜಿಕ ಜಾಲತಾಣದ ಮಾತೃಸಂಸ್ಥೆಯಲ್ಲಿ ಚೀನಾ ಮೂಲದ ಶುನ್‌ವೈ ಕ್ಯಾಪಿಟಲ್‌ ಹೊಂದಿದ್ದ ಷೇರುಪಾಲನ್ನು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಫ್ಲಿಪ್‌ಕಾರ್ಟ್‌ನ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಸೇರಿದಂತೆ ಹಲವರು ಖರೀದಿಸಿದ್ದಾರೆ.

ಬುಕ್‌ಮೈಶೋ ಸಂಸ್ಥಾಪಕ ಆಶಿಶ್ ಹೇಮರಾಜನಿ, ಉಡಾನ್‌ ಸಹಸಂಸ್ಥಾಪಕ ಸುಜಿತ್ ಕುಮಾರ್, ಜೆರೊದಾ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಕೂಡ ಶುನ್‌ವೈ ಕ್ಯಾಪಿಟಲ್‌ ಹೊಂದಿದ್ದ ಷೇರುಪಾಲನ್ನು ಖರೀದಿಸಿದವರ ಸಾಲಿನಲ್ಲಿ ಇದ್ದಾರೆ. ‘ಕೂ’ನ ಮಾತೃಸಂಸ್ಥೆಯ ಹೆಸರು ಬಾಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್.

ಇವರು ಷೇರುಪಾಲು ಖರೀದಿಸಿರುವ ವಿಷಯವನ್ನು ಬಾಂಬಿನೇಟ್ ಟೆಕ್ನಾಲಜೀಸ್ ಕಂಪನಿಯೇ ತಿಳಿಸಿದೆ. ಆದರೆ, ಯಾರು ಎಷ್ಟು ಪಾಲು ಖರೀದಿಸಿದ್ದಾರೆ ಎಂಬ ವಿವರ ನೀಡಿಲ್ಲ. ‘ಕೂ’ ಈಗ 10 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ADVERTISEMENT

‘ಕೂ ಆ್ಯಪ್‌ಗೆ ಬೆಂಬಲವಾಗಿ ನಿಲ್ಲಲು ನನಗೆ ಸಂತಸವಾಗುತ್ತಿದೆ. ಭಾರತೀಯನಾಗಿ ನಾನು ಅವರಿಗೆ ನನ್ನ ಬೆಂಬಲವನ್ನು ಹೃತ್ಪೂರ್ವಕವಾಗಿ ನೀಡುತ್ತಿದ್ದೇನೆ’ ಎಂದು ಶ್ರೀನಾಥ್ ಅವರು ಹೇಳಿದ್ದಾರೆ. ಶುನ್‌ವೈ ಕ್ಯಾಪಿಟಲ್ ಕಂಪನಿಯು ಬಾಂಬಿನೇಟ್ ಟೆಕ್ನಾಲಜೀಸ್ ಕಂಪನಿಯಲ್ಲಿ ಶೇ 9ಕ್ಕಿಂತ ತುಸು ಹೆಚ್ಚಿನ ಪ್ರಮಾಣದ ಷೇರು ಹೊಂದಿತ್ತು.

ಚೀನಾ ಮೂಲದ ಹೂಡಿಕೆದಾರರು ಕಂಪನಿಯಿಂದ ಹೂಡಿಕೆಯನ್ನು ಹಿಂದಕ್ಕೆ ಪಡೆಯಲಿದ್ದಾರೆ ಎಂದು ‘ಕೂ’ ಸಹಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಈ ಹಿಂದೆ ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.