ADVERTISEMENT

ಕನ್ನಡಿಗರ ಸ್ವಾಭಿಮಾನಕ್ಕೆ ಬೆದರಿದ ಗೂಗಲ್‌: ಕನ್ನಡ ಈಗ ಜಗತ್ತಿನ 'ಭಾಷೆಗಳ ರಾಣಿ'

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 12:42 IST
Last Updated 3 ಜೂನ್ 2021, 12:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕನ್ನಡಿಗರ ಸ್ವಾಭಿಮಾನದ ಅಲೆಗೆ ಬೆದರಿರುವ ಗೂಗಲ್‌, ಸದ್ಯ ಕನ್ನಡ ಭಾಷೆಯ ಕುರಿತ ಅವಹೇಳನಕಾರಿ ವಿಷಯ ತೋರಿಸುತ್ತಿದ್ದ ವೆಬ್‌ಸೈಟ್‌ನ ವಿವಾದಾತ್ಮಕ ಪುಟವನ್ನು ತೆಗೆದು ಹಾಕಿದೆ.

The Ugliest Language In the World ( ಭಾರತದ ಕುರೂಪ ಭಾಷೆ ಅಥವಾ ಕೆಟ್ಟ ಭಾಷೆ) ಎಂದು ಗೂಗಲ್‌ನಲ್ಲಿ ಹುಡುಕಿದರೆdebtconsolidationsquad.com ಎಂಬ ವೆಬ್‌ಸೈಟ್‌ 'ಕನ್ನಡ' ಎಂದು ಉತ್ತರ ನೀಡುತ್ತಿತ್ತು. ಇದರ ವಿರುದ್ಧಸಿಡಿದೆದ್ದ ಕನ್ನಡಿಗರು ವೆಬ್‌ಸೈಟ್‌ ವಿರುದ್ಧ ರಿಪೋರ್ಟ್‌ ಮಾಡಲಾರಂಭಿಸಿದರು. ಎಚ್ಚೆತ್ತ ಗೂಗಲ್‌ ವೆಬ್‌ಸೈಟ್‌ನ ಅವಹೇಳನಕಾರಿ ಮತ್ತು ವಿವಾದಾತ್ಮಕ ಪುಟವನ್ನು ತೆಗೆದು ಹಾಕಿತು.

ADVERTISEMENT

ಹೀಗೆ ರಿಪೋರ್ಟ್‌ ಮಾಡುವಾಗ ನೆಟ್ಟಿಗರುThe Ugliest Language In The Worldಎಂದು ಸರ್ಚ್‌ ಮಾಡಿದ್ದರಿಂದಾಗಿThe Ugliest Language In The World Kannada ಸಾಲು ಗೂಗಲ್‌ನಲ್ಲಿ ಟ್ರೆಂಡ್‌ ಅಗಿತ್ತು.

ಇದನ್ನು ಗಮನಿಸಿ ನೆಟ್ಟಿಗರು Queen Of The Language In The World Kannada (ಜಗತ್ತಿನ ಭಾಷೆಗಳ ರಾಣಿ ಕನ್ನಡ) ಎಂಬ ಪ್ರಶ್ನೆಯೊಂದಿಗೆ ಹುಡುಕಾಟ ನಡೆಸಿದರು. ಇದರ ಪರಿಣಾಮವಾಗಿ Queen of Languages In The World Kannada ಎಂಬ ಉತ್ತರ ಗೂಗಲ್‌ನಲ್ಲಿ ಸೆಟ್‌ ಆಗಿದೆ.

ಸಿಡಿದೆದ್ದ ಕನ್ನಡಿಗರು: ಟ್ವಿಟರ್‌ನಲ್ಲಿ#Kannada ಟ್ರೆಂಡ್‌

ಗೂಗಲ್‌ನಲ್ಲಿ ಕನ್ನಡದ ವಿರುದ್ಧ ಇಂಥ ಅಪಮಾನಕಾರಿ ಸಂಗತಿ ಕಾಣಿಸುತ್ತಿದೆ ಎಂದು ಗೊತ್ತಾದ ಕೂಡಲೇ ಸಾಮಾಜಿಕ ತಾಣಗಳಲ್ಲಿ ಕನ್ನಡದ ಪರ ಅಭಿಮಾನದ ಕಹಳೆ ಮೊಳಗಿತು. ಭಾಷೆ ವಿಚಾರದಲ್ಲಿನ ಗೂಗಲ್‌ನ ಅಸೂಕ್ಷ್ಮತೆಯನ್ನು ನೆಟ್ಟಿಗರು ಪ್ರಶ್ನೆ ಮಾಡಲಾರಂಭಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಸಂಸದ ಪಿ.ಸಿ ಮೋಹನ್‌, ಕನ್ನಡ ಪರ ಹೋರಾಟಗಾರರು, ಪತ್ರಕರ್ತರು, ಕನ್ನಡ ಗುಂಪುಗಳು ಗೂಗಲ್‌ ವಿರುದ್ಧ ತಿರುಗಿಬಿದ್ದವು. ಗೂಗಲ್‌ಗೆ ( @GoogleIndia @Google) ಟ್ಯಾಗ್‌ ಮಾಡಿ ತೀವ್ರ ಅಸಮಾಧಾನ ಹೊರ ಹಾಕಿದರು.ಎಲ್ಲರೂ ತಮ್ಮ ಪೋಸ್ಟ್‌ಗಳಲ್ಲಿ#Kannada ಹ್ಯಾಷ್‌ ಟ್ಯಾಗ್‌ ಬಳಸಿದ್ದರ ಪರಿಣಾಮವಾಗಿ ಗುರುವಾರ ಮಧ್ಯಾಹ್ನದ ನಂತರ ಟ್ವಿಟರ್‌ನಲ್ಲಿ#Kannada ಟ್ರೆಂಡ್‌ ಆಗಿತ್ತು. ಸಂಜೆ 5ರ ಹೊತ್ತಿಗೆ ಸುಮಾರ 26 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಈ ಹ್ಯಾಷ್‌ ಟ್ಯಾಗ್‌ನಲ್ಲಿ ಹೊರಬಿದ್ದಿದ್ದವು.

ChangeOrg ಯಲ್ಲಿ ಮನವಿ

debtconsolidationsquad.com ಎಂಬ ವೆಬ್‌ಸೈಟ್‌ ಕನ್ನಡವನ್ನು ಅವಹೇಳನ ಮಾಡಿರುವುದು, ಗೂಗಲ್‌ ಕೂಡ ಅದನ್ನೇ ಅನುಸರಿಸುತ್ತಿದೆ. ಇದನ್ನು ಕನ್ನಡಿಗರಾದ ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ವೆಬ್‌ಸೈಟ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಬೇಕಿದೆ ಎಂದು ಚೇಂಜ್‌ ಒಆರ್‌ಜಿಯಲ್ಲಿ ಸಹಿ ಸಂಗ್ರಹ ನಡೆಯಿತು. ಗುರುವಾರ ಸಂಜೆ 5ರ ಹೊತ್ತಿಗೆ 6 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ಸಹಿ ಮಾಡಿದ್ದರು.

ವಿನೋಬಾಭಾವೆ ಕನ್ನಡ ಪ್ರೀತಿ ಮುನ್ನೆಲೆಗೆ

ಭೂದಾನ’ ಚಳವಳಿಯ ಹರಿಕಾರ ಎಂದೇ ಖ್ಯಾತರಾದ, ಸ್ವಾತಂತ್ರ್ಯ ಹೋರಾಟಗಾರ ಆಚಾರ್ಯ ವಿನೋಬಾ ಭಾವೆ ಅವರು ಕನ್ನಡವನ್ನು ‘ಲಿಪಿಗಳ ರಾಣಿ‘ ಎಂದು ಬಣ್ಣಿಸಿದ್ದರು. ಈ ವಿಚಾರವನ್ನು ನೆಟ್ಟಿಗರು ಚರ್ಚೆಯ ಮುನ್ನೆಲೆಗೆ ತಂದರು. ಹೀಗಾಗಿಯೇQueen of Languages In The World Kannadaಎಂಬ ಸಾಲು ಗೂಗಲ್‌ನಲ್ಲಿ ಟ್ರೆಂಡ್‌ ಆಯಿತು.

ಯಾರು ಏನಂದರು?

ಕನ್ನಡಿಗರ ಸ್ವಾಭೀಮಾನ ಸುನಾಮಿಯಾದೀತು: ಎಚ್‌ಡಿಕೆ

ಭಾಷೆ ವಿಚಾರದಲ್ಲಿ ಗೂಗಲ್‌ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ ಕನ್ನಡ ಎಂದು ಉತ್ತರ ನೀಡುತ್ತಿದ್ದ ವೆಬ್‌ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು ಗೂಗಲ್‌ಗೆ ಅಸಾಧ್ಯವೇ?ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟ, ಕುರೂಪವಲ್ಲ. ಎಲ್ಲ ಭಾಷೆಗಳೂ ಸುಂದರವೇ. ಭಾಷೆ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಭಾಷೆ ವಿರುದ್ಧ ನಿಂದನೆ ಬಹಳ ನೋವಿನದ್ದು. ಹೀಗಾಗಿ ಈ ವಿಚಾರದಲ್ಲಿ ಗೂಗಲ್‌ಸೂಕ್ಷ್ಮವಾಗಿರಬೇಕು. ಕನ್ನಡವನ್ನು ಅವಹೇಳನ ಮಾಡಿದ್ದ ವೆಬ್‌ಪುಟ ಡಿಲಿಟ್‌ ಆಗಿರಬಹುದು.ಆದರೆ, ಅದರಿಂದ ಕನ್ನಡಿಗರಿಗಾದ ನೋವಿಗೇನು ಪರಿಹಾರ? ಎಂದು ಅವರು ಕೇಳಿದರು.

ಗೂಗಲ್‌ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ,ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲಎಂದು ಎಚ್ಚರಿಕೆ ನೀಡಿದರು.

ಇದರ ಜೊತೆಗೆ ಕುವೆಂಪು ಅವರ ಉಕ್ತಿಯನ್ನೂ ಎಚ್‌.ಡಿ ಕುಮಾರಸ್ವಾಮಿ ಈ ವೇಳೆ ಉಲ್ಲೇಖಿಸಿದರು. ‌‘ಇದು ನಿನ್ನ ಭಾಷೆ, ಇದು ದೇಶಭಾಷೆ,ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ,‘ ಎಂದು ಅವರು ಟ್ವೀಟ್‌ ಮಾಡಿದ್ದರು.

ಕನ್ನಡ ಕನ್ನಡಿಗರ ಹೆಮ್ಮೆ: ಲಿಂಬಾವಳಿ

2500 ವರ್ಷಗಳ ಹಿಂದೆಯೇ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ. ಜೊತೆಗೆ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು, ಕನ್ನಡ ಭಾಷೆ ಕನ್ನಡಿಗರ ಹೆಮ್ಮೆ.

ಗೂಗಲ್‌ ಕ್ಷಮೆ ಕೇಳಬೇಕು : ಪಿಸಿ ಮೋಹನ್‌

ಕನ್ನಡ ಭಾಷೆ ಶ್ರೀಮಂತ ಪರಂಪರೆ ಹೊಂದಿದೆ. ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಮಹಾಕಾವ್ಯಗಳನ್ನು ಬರೆದ ಮಹಾನ್ ವಿದ್ವಾಂಸರಿದ್ದರು. ಗೂಗಲ್‌ ಕ್ಷಮೆ ಕೇಳಬೇಕು ಎಂದು ಸಂಸದ ಪಿಸಿ ಮೋಹನ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.