ಬೆಂಗಳೂರು: ರಾಜ್ಯ ಸರ್ಕಾರ ಅಗತ್ಯ ಅನುದಾನ ಒದಗಿಸದೆ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಕಡೆಗಣಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಈ ವಿಶ್ವವಿದ್ಯಾಲಯದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇದೇ 18ರಂದು (ಶುಕ್ರವಾರ) ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ತಿಳಿಸಿದೆ.
#ಕನ್ನಡವಿವಿಉಳಿಸಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕನ್ನಡ ಮನಸುಗಳು ಸಂಜೆ 5 ಗಂಟೆಯಿಂದ ಟ್ವೀಟ್ ಮಾಡಬೇಕು. ರಾಜ್ಯ ಸರ್ಕಾರದ ತಾತ್ಸಾರ ಧೋರಣೆಯನ್ನು ಖಂಡಿಸಬೇಕು ಎಂದು ಕರವೇ ಅಧ್ಯಕ್ಷಟಿ. ಎ.ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ.
‘ಕನ್ನಡ ನುಡಿ, ಸಾಹಿತ್ಯ, ಪರಂಪರೆಯ ಸಂಶೋಧನೆಗಾಗಿ ಮೀಸಲಾದ ಏಕೈಕ ವಿಶ್ವವಿದ್ಯಾಲಯವಿದು. ವರ್ಷಕ್ಕೆ ₹ 6 ಕೋಟಿ ಅನುದಾನದ ಅಗತ್ಯವಿದ್ದರೂ ರಾಜ್ಯ ಸರ್ಕಾರ ಈ ವರ್ಷ ಕೇವಲ ₹ 50 ಲಕ್ಷ ಅನುದಾನ ನೀಡಿದೆ. ಈ ಸಂಸ್ಥೆಯ ಗುತ್ತಿಗೆ ನೌಕರರಿಗೆ ಸಂಬಳ ಕೊಡಲೂ ಸಾಧ್ಯವಾಗದ ಸ್ಥಿತಿಯನ್ನು ವಿಶ್ವವಿದ್ಯಾಲಯ ಎದುರಿಸುತ್ತಿದೆ. ಹೀಗಿರುವಾಗ ಸಂಶೋಧನಾ ಕಾರ್ಯಗಳನ್ನು ನಡೆಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಮತ ಪಡೆಯುವ ಉದ್ದೇಶದಿಂದ ಹೊಸ ಪ್ರಾಧಿಕಾರ ಸ್ಥಾಪಿಸಲು ಸರ್ಕರದ ಬಳಿ ಹಣವಿದೆ. ಆದರೆ ಕನ್ನಡದ ಏಕೈಕ ವಿಶ್ವವಿದ್ಯಾಲಯಕ್ಕೆ ನೀಡಲು ಹಣವಿಲ್ಲವೆಂದರೆ ಹೇಗೆ. ಈ ನೀತಿಯನ್ನು ಕನ್ನಡಿಗರೆಲ್ಲ ಒಕ್ಕೊರಲಿನಿಂದ ಖಂಡಿಸಬೇಕಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆರ್ಥಿಕ ಮುಗ್ಗಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ’ ಎಂಬ ವಿಶೇಷ ವರದಿ ಮೂಲಕ ‘ಪ್ರಜಾವಾಣಿ’ಯು ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.