ಕೋಟ್ಟಯಂ: ಸ್ವಾಮಿ ಅಯ್ಯಪ್ಪ ಮತ್ತು ದೇವಿ-ದೇವರ ಫೋಟೊಗಳಿರುವ ದೇವರ ಕೋಣೆಯಲ್ಲಿ ಬಾಲ ಯೇಸುವನ್ನು ಎತ್ತಿಕೊಂಡಿರುವ ಕನ್ಯಾ ಮರಿಯಾ ಫೋಟೊ! ಕೇರಳ ರಾಜ್ಯ ಪ್ರವಾಹದಿಂದ ನಲುಗಿ ಹೋದಾಗ ಜನರಲ್ಲಿ ಪರಸ್ಪರ ನಂಬಿಕೆಗಳು ಗಟ್ಟಿಯಾದವು ಎಂಬ ಅಡಿ ಟಿಪ್ಪಣಿಯೊಂದಿಗೆ ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕೋಟ್ಟಯಂನೀಲಮಂಗಲಂ ಮಾರ್ ಗ್ರಿಗೊರಿಯಸ್ ಆರ್ಥಡಾಕ್ಸ್ ಕಾಥಾಲಿಕೇಟ್ ಸೆಂಟರ್ ಗೆ ಪ್ರವಾಹ ನೀರು ನುಗ್ಗಿದ್ದಾಗ ಅಲ್ಲಿ ಕನ್ಯಾ ಮರಿಯಾಳ ಫೋಟೊ ಒದ್ದೆಯಾಗಿತ್ತು.ಇದನ್ನು ನೋಡಿದ ಸಂಡೇ ಸ್ಕೂಲ್ ಹೆಡ್ ಮಾಸ್ಟರ್ ಶಿಜು. ಕೆ. ಚುಮ್ಮಾರ್ ನೇತೃತ್ವದ ತಂಡವೊಂದು ಆ ಫೋಟೊವನ್ನು ಅಲ್ಲಿಂದ ತೆಗೆದಾಗ ಫೋಟೊವನ್ನು ಎಲ್ಲಿಡಬೇಕೆಂದು ಗೊತ್ತಾಗಲಿಲ್ಲ.
ಆಗ ನೆರೆ ಮನೆಯ ಸನಲ್ ಎಂಬವರು ಫೋಟೊವನ್ನು ತಮ್ಮಮನೆಯಲ್ಲಿರಿಸಬಹುದು ಎಂದಿದ್ದಾರೆ. ಆನಂತರ ಚರ್ಚ್ ನ ಪಾದ್ರಿ ಪಿ.ಯು ಕುರುವಿಳಾ ಅವರ ಅನುಮತಿ ಪಡೆದು ಸನಲ್ ಕುಮಾರ್ ಅವರ ಕೈಗೆ ಫೋಟೊ ನೀಡಲಾಗಿತ್ತು.
ಆ ಫೋಟೊವನ್ನು ಸನಲ್ ತಮ್ಮ ಮನೆಯ ದೇವರ ಕೋಣೆಯಲ್ಲಿರಿಸಿದ್ದಾರೆ. ಈ ಫೋಟೊದ ಹತ್ತಿರವೇ ಸ್ವಾಮಿ ಅಯ್ಯಪ್ಪ, ಗಣಪತಿ ಮೊದಲಾದ ದೇವರ ಫೋಟೊ ಇದೆ.ಸಂಜೆ ಹೊತ್ತಿಗೆ ದೀಪ ಬೆಳಗುವಾಗ ಕನ್ಯಾ ಮರಿಯಾಳಿಗೂ ದೀಪಾರಾಧನೆ ಮಾಡಲಾಯಿತು.ಪ್ರವಾಹದಿಂದ ಮನೆ-ಭೂಮಿ ನಾಶವಾಗಿದ್ದರೂ ಜನರುಒಗ್ಗಟ್ಟು ಮತ್ತು ಸೌಹಾರ್ದತೆಯಿಂದ ಕೇರಳವನ್ನು ಸುಸ್ಥಿತಿಗೆ ತರುವ ಪ್ರಯತ್ನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.