ತಮ್ಮೆಲ್ಲ ಚಿಂತನೆ, ಅನಿಸಿಕೆ ಅಭಿವ್ಯಕ್ತಪಡಿಸಲು, ಘಟನಾವಳಿಗಳಿಗೆ ಪ್ರತಿಕ್ರಿಯಿಸಲು ಇಂಗ್ಲಿಷ್ ಬಲ್ಲವರಿಗೆ ಟ್ವಿಟರ್ ಇದೆ. ಕನ್ನಡ ಭಾಷಿಕರೂ ಇದೇ ಬಗೆಯಲ್ಲಿ ತಮ್ಮ ಭಾವನೆಗಳನ್ನು ಇತರರ ಜತೆ ಹಂಚಿಕೊಳ್ಳಲು ‘ಕೂ’ ಹೆಸರಿನ (Koo) ಮೈಕ್ರೊ ಬ್ಲಾಗಿಂಗ್ ಕನ್ನಡಿಗರಲ್ಲಿ ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ಪ್ರಾದೇಶಿಕ ಭಾಷೆಗಳ ಪೈಕಿ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಟ್ವೀಟರ್‌ಗೆ ಪರ್ಯಾಯಮೈಕ್ರೊ ಬ್ಲಾಗ್ ತಾಣ ವನ್ನಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಬೆಂಗಳೂರಿನವರಾದ ಅಪ್ರಮೇಯ ರಾಧಾಕೃಷ್ಣ ಅವರು ಈ ಕನ್ನಡ ಮೈಕ್ರೊ ಬ್ಲಾಗಿಂಗ್‌ನ ರೂವಾರಿ.
ಕನ್ನಡಿಗರು ತಮ್ಮ ಮನಸ್ಸಿನ ಭಾವನೆಗಳನ್ನು ಧ್ವನಿ, ವಿಡಿಯೊ ಮತ್ತು ಅಕ್ಷರ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಬಹುದು. ಘಟನಾವಳಿಗಳಿಗೆ ಸ್ಪಂದಿಸಬಹುದು. ಸುದ್ದಿಗಳಿಗೆ ಪ್ರತಿಕ್ರಿಯಿಸಬಹುದು. ಕವನಗಳನ್ನೂ ಬರೆದು ಸಹೃದಯದ ಓದುಗರ ಜತೆ ಹಂಚಿಕೊಳ್ಳಬಹುದು. ‘ಕೂ ಕಿರುತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡವರ ಸಂಖ್ಯೆ ಈಗಾಗಲೇ ಐದು ಲಕ್ಷಕ್ಕೆ ತಲುಪಿದೆ. 1 ನಿಮಿಷದ ಧ್ವನಿ, 1 ನಿಮಿಷದ ವಿಡಿಯೊಗಳನ್ನು ಹಂಚಿಕೊಳ್ಳಬಹುದು’ ಎಂದು ಅಪ್ರಮೇಯ ಹೇಳುತ್ತಾರೆ.
‘ಜನಪ್ರಿಯ ನಟ, ನಟಿಯರು, ಕ್ರೀಡಾಪಟುಗಳು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಈಗಾಗಲೇ‘ಕೂ’ದಲ್ಲಿ ಸಕ್ರಿಯರಾಗಿದ್ದಾರೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ರಾಜ್ಯದ ಮೂಲೆ
ಮೂಲೆಯಲ್ಲಿ ಬಳಕೆದಾರರುಇದ್ದಾರೆ.
‘ಸುದ್ದಿ, ಘಟನಾವಳಿ, ಚಿಂತನೆಯು ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲಿ ವ್ಯಾಪಕ ಜನಪ್ರಿಯತೆ ಪಡೆಯುವಂತೆ, ‘ಕೂ’ ಬಳಕೆದಾರರೇ ತಮಗಿಷ್ಟದ ವಿದ್ಯಮಾನ, ಚಿಂತನೆಯನ್ನು ಟ್ರೆಂಡ್ ಮಾಡುವ ಅವಕಾಶ ಇಲ್ಲಿಯೂ ಇದೆ. ರಾಜ್ಯಕ್ಕೆ ಸಂಬಂಧಿಸಿದ ವಿದ್ಯಮಾನಗಳೇ ಸಹಜವಾಗಿಯೇ ಇಲ್ಲಿ ಹೆಚ್ಚು ಟ್ರೆಂಡ್ ಆಗಲಿವೆ. ‘ಕೂ’ ಬಳಕೆದಾರರು ತಮ್ಮಿಷ್ಟದವರನ್ನು ಅನುಸರಿಸಿದರೆ ಹಿಂಬಾಲಿಸುವವರ ಅನಿಸಿಕೆಗಳಿಗೆ ಹರಿದು ಬರುವ ಪ್ರತಿಕ್ರಿಯೆಗಳೆಲ್ಲವನ್ನು ಸುಲಭವಾಗಿ ವೀಕ್ಷಿಸಬಹುದು. ಪಕ್ಷಿಗಳ ಕೂಗು ಆಧರಿಸಿ ಈ ತಾಣಕ್ಕೆ ‘ಕೂ’ ಹೆಸರಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.