ADVERTISEMENT

ಹಾದಿ ತಪ್ಪಿಸುವ ವಿಡಿಯೊ ಸಮರ್ಥನೆಗೆ ಅಂಥದ್ದೇ ವಿಡಿಯೊ ಬಳಸಿದ ಮಧುಕೀಶ್ವರ್

ರಿಟ್ವೀಟ್ ಮಾಡಿದ ಮತ್ತೊಂದು ವಿಡಿಯೊವೂ ಹಾದಿ ತಪ್ಪಿಸುವಂಥದ್ದು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 15:00 IST
Last Updated 16 ಡಿಸೆಂಬರ್ 2018, 15:00 IST
   

ಬೆಂಗಳೂರು:ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್‌ ರ್‍ಯಾಲಿಯೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೊವೊಂದನ್ನು ಚಿಂತಕಿ ಮಧುಕೀಶ್ವರ್ ಈಚೆಗೆ ಟ್ವೀಟ್ ಮಾಡಿದ್ದರು. ಅದು ಹಾದಿತಪ್ಪಿಸುವ ವಿಡಿಯೊ ಎಂಬುದು ನಂತರ ಬಯಲಾಗಿತ್ತು. ಆದರೀಗ ತಮ್ಮ ಹಿಂದಿನ ಟ್ವೀಟ್‌ ಅನ್ನು ಸಮರ್ಥಿಸಲು ಅವರು ರಿಟ್ವೀಟ್ ಮಾಡಿರುವ ಮತ್ತೊಂದು ವಿಡಿಯೊವೂ ಹಾದಿ ತಪ್ಪಿಸುವಂತಹದ್ದು ಎಂಬುದನ್ನು ಆಲ್ಟ್‌ನ್ಯೂಸ್ ಸುದ್ದಿತಾಣ ಬಯಲಿಗೆಳೆದಿದೆ.

ಕಾಂಗ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು @Offensiv ಎಂಬ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೊವನ್ನುಮಧುಕೀಶ್ವರ್ ರಿಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಡಿಯೊವೂ ಡಿಲೀಟ್ ಆಗಿದೆ. (ಆರ್ಕೈವ್ ಆಗಿರುವ ವಿಡಿಯೊ ನೋಡಲು ಇಲ್ಲಿ ಕ್ಲಿಕ್ಕಿಸಿ)

ಈ ವಿಡಿಯೊವನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೈಪುರ ಪೊಲೀಸರನ್ನುಮಧುಕೀಶ್ವರ್ ಒತ್ತಾಯಿಸಿದ್ದಾರೆ.

ADVERTISEMENT

ಮಧುಕೀಶ್ವರ್ ರಿಟ್ವೀಟ್ ಮಾಡಿರುವ ವಿಡಿಯೊವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಪಾಕಿಸ್ತಾನ್ ಜಿಂದಾಬಾದ್’ ಅಲ್ಲ ‘ಭಾಟಿ ಸಾಬ್ ಜಿಂದಾಬಾದ್’

ಮೇಲಿನ ವಿಡಿಯೊ ವಿಧಾನಸಬೆ ಚುನಾವಣೆಗೂ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆ ವಿಡಿಯೊದ ಅಸಲಿಯತ್ತನ್ನು ಬಿಬಿಸಿ ಹಿಂದಿ, ಎಎಫ್‌ಪಿ, ದಿ ಟೈಮ್ಸ್ ಆಫ್‌ ಇಂಡಿಯಾ ಮತ್ತು ಇಂಡಿಯಾ ಟುಡೆ ಅದಾಗಲೇ ಬಯಲಿಗೆಳೆದಿದ್ದವು.

ವಿಡಿಯೊದಲ್ಲಿ ಕಂಡುಬರುವ ಬ್ಯಾನರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ‘ನಗರ ಕಾಂಗ್ರೆಸ್ ಸಮಿತಿ ರಾಜಸಮಂದ್’, ಎಂದು ಬರೆದಿರುವುದು ಮತ್ತು ಕಾರ್ಯಕರ್ತರು ‘ನಾವು ಸವಾಲು ಸ್ವೀಕರಿಸಿದ್ದೇವೆ. ಈ ಬಾರಿ ನಾವು ನೂರಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಭಾಟಿ ಸಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿರುವುದು ಕಂಡುಬರುತ್ತದೆ.

ನಾರಾಯಣ ಸಿಂಗ್ ಭಾಟಿ ಅವರು ರಾಜಸಮಂದ್‌ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅಲ್ಲಿದ್ದ ಕಾರ್ಯಕರ್ತರು ಅವರ ಹೆಸರನ್ನು ಹೇಳಿದ್ದನ್ನು ದೃಢಪಡಿಸಲಾಗಿದೆ ಎಂದು ಆಲ್ಟ್‌ನ್ಯೂಸ್ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.