ನ್ಯೂಯಾರ್ಕ್: ಫೇಸ್‌ಬುಕ್‌ನ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುತ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ.
ಅಂದರೆ, ಮೆಟಾ ಕಂಪನಿಯ ಶೇಕಡ 13ರಷ್ಟು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಟ್ವಿಟರ್ ಕಂಪನಿಯಲ್ಲಿ ಉದ್ಯೋಗ ಕಡಿತ ನಡೆದ ವಾರದ ನಂತರದಲ್ಲಿ ಮೆಟಾ ಕೂಡ ಅದೇ ಹಾದಿ ತುಳಿದಿದೆ. ಸಾಂಕ್ರಾಮಿಕದ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ನೇಮಕಾತಿ ನಡೆಸಿದ್ದ ಹಲವು ತಂತ್ರಜ್ಞಾನ ಕಂಪನಿಗಳು ಈಗ ಉದ್ಯೋಗ ಕಡಿತ ಮಾಡುತ್ತಿವೆ.
ಸಾಂಕ್ರಾಮಿಕ ಕೊನೆಗೊಂಡ ನಂತರದಲ್ಲಿಯೂ ತೀವ್ರಗತಿಯ ಬೆಳವಣಿಗೆ ಇರುತ್ತದೆ ಎಂಬ ನಿರೀಕ್ಷೆಯಲ್ಲಿ ದೊಡ್ಡ ಮಟ್ಟದಲ್ಲಿ ನೇಮಕಾತಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ದುರದೃಷ್ಟದ ಸಂಗತಿಯೆಂದರೆ, ನಿರೀಕ್ಷಿಸಿದ ರೀತಿಯಲ್ಲಿ ಅದು ಆಗಲಿಲ್ಲ ಎಂದು ಝುಕರ್‌ಬರ್ಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತರ ಸಾಮಾಜಿಕ ಜಾಲತಾಣ ಕಂಪನಿಗಳ ರೀತಿಯಲ್ಲಿಯೇ ಮೆಟಾ ಕೂಡ ಲಾಕ್‌ಡೌನ್ ಕಾಲಘಟ್ಟದಲ್ಲಿ ಹಣಕಾಸಿನ ವರಮಾನ ಹೆಚ್ಚಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಜನ ಹೆಚ್ಚಾಗಿ ಮನೆಯೊಳಗೆ ಕಾಲ ಕಳೆಯುತ್ತಿದ್ದರು, ತಮ್ಮ ಸ್ಮಾರ್ಟ್‌ಫೋನ್ ಮೂಲಕ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುತ್ತಿದ್ದರು.
ಆದರೆ, ನಿರ್ಬಂಧಗಳು ಸಡಿಲವಾದ ನಂತರದಲ್ಲಿ ಜನ ಹೊರಗೆ ಹೋಗಲು ಆರಂಭಿಸಿದರು. ಕಂಪನಿಗಳ ಆದಾಯದ ಬೆಳವಣಿಗೆಯು ಕುಸಿಯಲಾರಂಭಿಸಿತು. ಆರ್ಥಿಕ ಮಂದಗತಿ ಹಾಗೂ ಆನ್‌ಲೈನ್ ಜಾಹೀರಾತು ವರಮಾನ ಹೆಚ್ಚಳವು ಆಶಾದಾಯಕ ಆಗಿಲ್ಲದಿರುವುದು ಮೆಟಾ ಕಂಪನಿಯ ಸಮಸ್ಯೆಗಳಿಗೆ ಕಾರಣ. ಮೆಟಾ ಕಂಪನಿಗೆ ಹೆಚ್ಚಿನ ಆದಾಯ ಸಿಗುವುದು ಆನ್‌ಲೈನ್ ಜಾಹೀರಾತುಗಳ ಮೂಲಕ.
ಮೆಟಾ ಕಂಪನಿಯು ‘ಮೆಟಾವರ್ಸ್’ ಮೇಲೆ 10 ಬಿಲಿಯನ್ ಡಾಲರ್‌ಗೂ (ಅಂದಾಜು ₹ 81 ಸಾವಿರ ಕೋಟಿ) ಹೆಚ್ಚು ಹೂಡಿಕೆ ಮಾಡಿದೆ. ಇದು ಆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದವರ ಚಿಂತೆಗೆ ಕಾರಣವಾಗಿದೆ. ಟಿಕ್‌ಟಾಕ್ ಕಡೆಯಿಂದ ಎದುರಾಗಿರುವ ಸ್ಪರ್ಧೆಯು ಮೆಟಾ ಕಂಪನಿಗೆ ಸವಾಲಾಗಿದೆ. ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಕಡೆಯಿಂದ ಯುವಕರು ಟಿಕ್‌ಟಾಕ್ ಕಡೆ ವಾಲುತ್ತಿದ್ದಾರೆ.
ತಗ್ಗಿದ ವರಮಾನ
ಆ್ಯಪಲ್ ಕಂಪನಿಯು ಖಾಸಗಿತನಕ್ಕೆ ಸಂಬಂಧಿಸಿದಂತೆ ಜಾರಿಗೊಳಿಸಿರುವ ನೀತಿಗಳಿಂದಾಗಿಯೂ ಮೆಟಾ ವರಮಾನಕ್ಕೆ ಧಕ್ಕೆ ಆಗಿದೆ. ಮೆಟಾ ಕಂಪನಿಯ ಷೇರು ಮೌಲ್ಯವು ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಇದುವರೆಗೆ ಶೇ 69ರಷ್ಟು ಕುಸಿದಿದೆ.
‘ನಾವು ವೆಚ್ಚವನ್ನು ಕಡಿಮೆ ಮಾಡಿದ್ದೇವೆ, ಬಜೆಟ್ ತಗ್ಗಿಸಿದ್ದೇವೆ, ಭತ್ಯೆಗಳನ್ನು ಕಡಿಮೆ ಮಾಡುತ್ತಿದ್ದೇವೆ, ರಿಯಲ್ ಎಸ್ಟೇಟ್ ವಲಯದಲ್ಲಿ ನಮ್ಮ ಹೆಜ್ಜೆ ಗುರುತು ಕಡಿಮೆ ಮಾಡುತ್ತಿದ್ದೇವೆ’ ಎಂದು ಮಾರ್ಕ್ ಝುಕರ್‌ಬರ್ಗ್ ಹೇಳಿದ್ದಾರೆ.
ನೌಕರರನ್ನು ಕೆಲಸದಿಂದ ತೆಗೆಯುವ ನಿರ್ಧಾರವು ‘ಮೆಟಾ ಇತಿಹಾಸದಲ್ಲಿನ ಅತ್ಯಂತ ಕಷ್ಟದ ಬದಲಾವಣೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.