ADVERTISEMENT

370ನೇ ವಿಧಿ ರದ್ದತಿಗಾಗಿ ಮೋದಿ ಧರಣಿ; ವೈರಲ್ ಚಿತ್ರದ ಹಿಂದಿರುವ ನಿಜ ಸಂಗತಿಯೇನು?

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 10:52 IST
Last Updated 6 ಆಗಸ್ಟ್ 2019, 10:52 IST
   

ಬೆಂಗಳೂರು:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದ್ದ 370ನೇ ವಿಧಿ ರದ್ದು ಮಾಡಿರುವ ಐತಿಹಾಸಿಕ ನಿರ್ಧಾರವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಯವರ ಧರಣಿ ಸತ್ಯಾಗ್ರಹದ ಫೋಟೊವೊಂದು ವೈರಲ್ ಆಗಿದೆ.

ಸಂವಿಧಾನದ 370ನೇ ವಿಧಿಯು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ ಎಂಬ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೊರಡಿಸಿದ್ದು, ಈ ಅಧಿಸೂಚನೆ ಬಗೆಗಿನ ನಿರ್ಣಯವನ್ನು ಗೃಹ ಸಚಿವ ಅಮಿತ್ ಶಾ ಸೋಮವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ಮಂಡಿಸಿದ್ದರು.ಅಮಿತ್ ಶಾ ನಿರ್ಣಯ ಮಂಡನೆ ಮಾಡುತ್ತಿದ್ದಂತೆ ಕೇಂದ್ರ ಸರ್ಕಾರದ ನಡೆಯನ್ನು ಶ್ಲಾಘಿಸಿ ನೆಟ್ಟಿಗರು ಹಲವಾರು ಪೋಸ್ಟ್, ಟ್ವೀಟ್ ಮಾಡಿದ್ದರು.

ಇದೆಲ್ಲದರ ನಡುವೆಪ್ರಧಾನಿ ನರೇಂದ್ರ ಮೋದಿಯವರು 370ನೇ ವಿಧಿ ವಿರೋಧಿಸಿ ಧರಣಿ ಸತ್ಯಾಗ್ರಹದಲ್ಲಿ ಕುಳಿತಿರುವ ಕಪ್ಪು ಬಿಳುಪು ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.ಮೋದಿ ಯೋಚಿಸಿದ್ದನ್ನು ಮಾಡಿಯೇ ತೀರುತ್ತಾರೆ ಎಂಬ ಶೀರ್ಷಿಕೆಯಲ್ಲಿ ಈ ಫೋಟೊ ಹರಿದಾಡಿತ್ತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸೇರಿದಂತೆ ಹಲವಾರು ಪ್ರಮುಖರೂ ಈ ಫೋಟೊವನ್ನು ಶೇರ್ ಮಾಡಿದ್ದಾರೆ.

ADVERTISEMENT

ಫೋಟೊದಲ್ಲಿ ಏನಿದೆ?
370 ಹಠಾವೊ, ಆತಂಕ್‌ವಾದ್ ಮಿಟಾವೋ, ದೇಶ್ ಬಟಾವೋ ( 370 ತೆಗೆದು ಹಾಕಿ, ಭಯೋತ್ಪಾದನೆ ನಿಗ್ರಹವಾಗಲಿ, ದೇಶ ರಕ್ಷಿಸಿ) ಎಂದು ಬರೆದಿರುವ ಬ್ಯಾನರ್ ಮೋದಿಯವರ ಹಿಂದೆ ಕಾಣಿಸುತ್ತದೆ.

ಈ ಫೋಟೊ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕಾಡಿದ ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್, ಇದು 1991-92ರಲ್ಲಿ ನಡೆದ ಏಕತಾ ಯಾತ್ರೆಯ ಫೋಟೊ ಆಗಿದೆ ಎಂದು ವರದಿ ಮಾಡಿದೆ.

1991 ಡಿಸೆಂಬರ್ 11ರಂದು ಆರಂಭವಾದ ಏಕತಾ ಯಾತ್ರೆಗೆ ಆಗಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ ನೇತೃತ್ವ ನೀಡಿದ್ದರು.ಕನ್ಯಾಕುಮಾರಿಯಿಂದ ಕಾಶ್ಮೀರದವರಿಗಿರುವ ಯಾತ್ರೆ ಇದಾಗಿದ್ದು, ಮೋದಿ ಈ ಯಾತ್ರೆಯ ಸಂಚಾಲಕರಾಗಿದ್ದರು. ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿ 1992, ಜನವರಿ 26ರಂದು ಈ ಯಾತ್ರೆ ಪೂರ್ಣಗೊಂಡಿತ್ತು.

ವೈರಲ್ ಚಿತ್ರವನ್ನು ಗಮನಿಸಿ ನೋಡಿದರೆ ಮೋದಿ ಹಿಂದಿರುವ ಬ್ಯಾನರ್ ಮೇಲೆ ಚಲೋ ಕಾಶ್ಮೀರ್ ಎಂದು ಬರೆದಿದೆ. ಇದೇ ಯಾತ್ರೆಯ ಇನ್ನೊಂದು ಫೋಟೊದಲ್ಲಿ ಮೋದಿಯವರು ಮುರಳಿ ಮನೋಹರ್ ಜೋಷಿ ಜತೆ ಬಸ್‌ವೊಂದರ ಮುಂದೆ ನಿಂತಿರುವುದು ಕಾಣುತ್ತದೆ.

ಬಸ್‌ನಲ್ಲಿಯೂ ಚಲೋ ಕಾಶ್ಮೀರ್ ಎಂದು ಬರೆದಿರುವುದು ಕಾಣುತ್ತದೆ. ಹಾಗಾಗಿ ಇದು ಏಕತಾ ಯಾತ್ರೆಯ ವೇಳೆ ತೆಗೆದ ಚಿತ್ರ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ.

ಈ ಫೋಟೊ ಏಕತಾ ಯಾತ್ರೆಯದ್ದು ಎಂದು ದೃಢೀಕರಿಸುವುದಕ್ಕಾಗಿ ಇಂಡಿಯಾ ಟುಡೇ ತಂಡ ಪತ್ರಕರ್ತ ಉದಯ್ ಮಹೂರ್‌ಕರ್ ಅವರನ್ನು ಸಂಪರ್ಕಿಸಿದೆ. ಮೋದಿ ಬಗ್ಗೆ ಮಾರ್ಚಿಂಗ್ ವಿದ್ ಎ ಬಿಲಿಯನ್ ಎಂಬ ಪುಸ್ತಕ ಬರೆದ ಪತ್ರಕರ್ತರಾಗಿದ್ದಾರೆ ಉದಯ್.

ಮೋದಿಯವರ ಈ ಕಪ್ಪು ಬಿಳುಪು ಚಿತ್ರದ ಬಗ್ಗೆ ಉದಯ್ ಅವರಲ್ಲಿ ಕೇಳಿದಾಗ ಆ ಚಿತ್ರ ದೆಹಲಿಯಲ್ಲಿ ಕ್ಲಿಕ್ಕಿಸಿದ್ದಾಗಿರಬಹುದು. ಏಕತಾ ಯಾತ್ರೆ ಆರಂಭವಾಗುವ ಮುನ್ನ ತೆಗೆದ ಚಿತ್ರ ಅದು ಎಂದಿದ್ದಾರೆ. 1991-92ರಲ್ಲಿ ಏಕತಾ ಯಾತ್ರೆ ವೇಳೆ ತೆಗೆದ ಫೋಟೊ ಇದು ಎಂಬುದಕ್ಕೆ ಸಾಕಷ್ಟು ದಾಖಲೆಗಳುಈ ಮೂಲಕ ಸಿಕ್ಕಿದೆ. ಅಂದಹಾಗೆ ಈ ಫೋಟೊ ತೆಗೆದ ನಿರ್ದಿಷ್ಟ ದಿನಾಂಕ ಮತ್ತು ಸ್ಥಳದಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲಿಯವರಿಗೆ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.