ನವದೆಹಲಿ: ನೂತನ ಐಟಿ ಕಾನೂನಿನ ನಿಯಮಗಳನ್ನು ಅನುಸರಿಸಲು ಕಾಲಾವಕಾಶವನ್ನು ಟ್ವಿಟರ್ ಕೋರಿರುವುದಾಗಿ ವರದಿಯಾಗಿದೆ. ಕಳೆದ ವಾರ ಕೇಂದ್ರ ಸರ್ಕಾರ ನೀಡಿದ ಹೊಸ ನಿಯಮಗಳ ಅನುಸರಿಸಲು ಕಡೆಯ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಟ್ವಿಟರ್, ಕೊರೊನಾ ಸಂಕಷ್ಟದ ಸಮಯವಾದ್ದರಿಂದ ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರಿಕೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.
ಐಟಿ ಕಾನೂನಿನ ಹೊಸ ನಿಯಮಗಳನ್ನು ಅನುಸರಿಸಲು ಸಮಯಾವಕಾಶ ಕೋರಿ ಟ್ವಿಟರ್ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಟ್ವಿಟರ್ ವಕ್ತಾರ, ಭಾರತದೊಂದಿಗೆ ಟ್ವಿಟರ್ ಆಳವಾದ ಸಂಬಂಧ ಇರಿಸಿಕೊಂಡಿದೆ. ಅನುಪಮ ಸೇವೆಯನ್ನು ಒದಗಿಸುತ್ತಿದೆ. ಕೇಂದ್ರ ಸರ್ಕಾರದ ಹೊಸ ನೀತಿಗಳನ್ನು ಅನುಸರಿಸಲು ಎಲ್ಲ ವಿಧದ ಪ್ರಯತ್ನಗಳನ್ನು ಮಾಡಲಾಗುವುದು. ಭಾರತ ಸರ್ಕಾರದ ಜೊತೆಗಿನ ರಚನಾತ್ಮಕ ಮಾತುಕತೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿಯಮಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸಿರುವುದು ಮೈಕ್ರೋಬ್ಲಾಗಿಂಗ್ ಸೈಟ್‌ನ ಬದ್ಧತೆಯ ಕೊರತೆಯಾಗಿದೆ. ಅಲ್ಲದೆ ಈ ವೇದಿಕೆಯಲ್ಲಿ ದೇಶದ ಜನರಿಗೆ ಸುರಕ್ಷಿತ ಅನುಭವ ನೀಡುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ದಶಕದಿಂದಲೂ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹೊರತಾಗಿಯೂ ದೇಶದ ಜನರಿಗೆ ಈ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಸಮಯೋಚಿತವಾಗಿ ಪಾರದರ್ಶಕವಾಗಿ ಬಗೆಹರಿಸುವ ನಿಯಮವನ್ನು ಒಪ್ಪಿಕೊಳ್ಳಲು ಟ್ವಿಟರ್ ನಿರಾಕರಿಸಿದೆ ಎಂದು ಐಟಿ ಸಚಿವಾಲಯ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.