ADVERTISEMENT

ಪಾರ್ಲೆ–ಜಿ ಜತೆ ನೆನಪುಗಳ ಮೆರವಣಿಗೆ..

ಬಿಸ್ಕಿತ್‌ ಜತೆ ಬೆಸೆದುಕೊಂಡ ಬಾಲ್ಯದ ನೆನಪುಗಳ ಮೆಲುಕು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 8:34 IST
Last Updated 12 ಜೂನ್ 2020, 8:34 IST
ಪಾರ್ಲೆ–ಜಿ
ಪಾರ್ಲೆ–ಜಿ   

ಹಳದಿ, ಕೆಂಪು ರ‍್ಯಾಪರ್‌ ಮೇಲಿನ ನಸುನಗುವ ಮುದ್ದಾದ ಮಗುವಿನ ಚಿತ್ರವಿರುವ ಪಾರ್ಲೆ–ಜಿ ಬಿಸ್ಕತ್ ನೋಡಿದ ಕೂಡಲೇ, ಹಿರಿಯರು, ಮಧ್ಯವಯಸ್ಕರ ಮನಸ್ಸು ಬಾಲ್ಯದ ದಿನಗಳತ್ತ ಜಾರುತ್ತದೆ.

ಮುಂಜಾನೆಯ ಬಿಸಿ ಬಿಸಿ ಹಬೆಯಾಡುವ ಚಹಾ/ಕಾಫಿಯಲ್ಲಿ ಬಿಸ್ಕತ್ತನ್ನು ಮುಳುಗಿಸಿ, ಮುಳುಗಿ ಮಿದುವಾದ ಭಾಗವನ್ನು ಬಾಯಲ್ಲಿಟ್ಟು ಕಸಕ್‌ ಎಂದು ಕಚ್ಚಿದಾಗ.. ಆಹಾ.. ಎಂಥಾ ರುಚಿ.. ಅದನ್ನು ವರ್ಣಿಸಲಸದಳ.

ಪಾರ್ಲೆ–ಜಿ ಬಿಸ್ಕತ್ತು, ಚಹಾ ಜೋಡಿಯ ಆಹಾರವಷ್ಟೇ ಅಲ್ಲ, ಬಡವರ, ಕೂಲಿ ಕಾರ್ಮಿಕರ, ಉದ್ಯೋಗ ಹುಡುಕುತ್ತಿದ್ದ ಯುವ ಸಮೂಹದ ಒಪ್ಪೊತ್ತಿನ ಆಹಾರವಾಗಿತ್ತು. ಅನೇಕ ಸಾಧಕರು ತಮ್ಮ ಸಾಧನೆಯ ಹಾದಿಯನ್ನು ವಿವರಿಸುವಾಗ ‘ಆಗ ನಾನು ಪಾರ್ಲೆ ಬಿಸ್ಕತ್ತು, ಒಂದು ಚಹಾದಲ್ಲೇ ದಿನ ದೂಡುತ್ತಿದ್ದೆ‘ ಎಂದು ಹೇಳಿಕೊಳ್ಳುವುದನ್ನು ಕೇಳಿರುತ್ತೀರಿ. ಅಷ್ಟರಮಟ್ಟಿಗೆ ಎಲ್ಲ ವರ್ಗಕ್ಕೂ ‘ಸಂಬಂಧಿ‘ಯಾಗಿತ್ತು ಈ ಪಾರ್ಲೆ ಜಿ.

ADVERTISEMENT

ಆದರೆ, ಮಾರುಕಟ್ಟೆಯಲ್ಲಿ ದೇಶಿ ಮತ್ತು ವಿದೇಶಿ ಹೊಸ ಬಿಸ್ಕಿತ್‌ ಬ್ರ್ಯಾಂಡ್‌ಗಳ ಅಬ್ಬರ ಮತ್ತು ಪೈಪೋಟಿ ಮಧ್ಯೆ ಕಳೆಗುಂದಿತ್ತು. ಈಗ ಪಾರ್ಲೆ–ಜಿ ಮೂರು ತಿಂಗಳ ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಮತ್ತೆ ಜನಪ್ರಿಯವಾಗಿದೆ. ಈ ಸಮಯದಲ್ಲಿ ಊರಿಗೆ ಹೋಗಲಾರದೇ ಇದ್ದಲ್ಲೇ ಸಿಕ್ಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಈ ಪಾರ್ಲೆ–ಜಿ ಆಹಾರವಾಗಿದೆ. ಅನೇಕ ದಾನಿಗಳು ಆಹಾರ–ನೀರು ಪೂರೈಕೆ ಮಾಡುವ ವೇಳೆ ಪಾರ್ಲೆ–ಜಿ ಬಿಸ್ಕತ್ತನ್ನೇ ಕೊಟ್ಟಿದ್ದಾರೆ. ಹೀಗಾಗಿ ಈ ಬಿಸ್ಕತ್ತು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ. ಪಾರ್ಲೆ ಜಿ ಬಿಸ್ಕತ್ತಿನ ಮಾರಾಟದ ಸುದ್ದಿಯನ್ನು ಓದಿದ ಅನೇಕರು, ಆ ಬಿಸ್ಕತ್ತಿನ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿಬಿಟ್ಟಿದೆ.

ಟ್ರೆಂಡಿಂಗ್ ಆಯ್ತು...

ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಸ್ಕತ್ತು ಪೊಟ್ಟಣದ ಕವರ್‌ ಚಿತ್ರವನ್ನು ಪೋಸ್ಟ್‌ ಮಾಡಿ, ತಮ್ಮ ಭಾವನೆಗಳನ್ನು ಹಂಚಿಕೊಂಡರೆ, ಇನ್ನೂ ಕೆಲವರು, ‘ಈಟ್‌ ಇಸ್‌ ಮೋರ್ ದ್ಯಾನ್ ಜಸ್ಟ್‌ ಬಿಸ್ಕಿಟ್’‌ ಎಂದು ಬಣ್ಣಿಸಿದ್ದಾರೆ.ಬಾಲಿವುಡ್ ನಟ ರಣದೀಪ್ ಹೂಡಾ‌, ‘ಮುಂಬೈ ಥಿಯೇಟರ್‌ ದಿನಗಳಿಂದಲೇ ಒಂದು ಕಪ್‌ ಚಹಾದೊಂದಿಗೆ ಪಾರ್ಲೆ–ಜಿ ನನ್ನ ಹಸಿವು ನೀಗಿಸಿತ್ತು. ನನ್ನ ಭವಿಷ್ಯ ರೂಪಿಸುವಲ್ಲಿ ಈ ಬಿಸ್ಕಿತ್ ಪಾತ್ರವೂ ಇದೆ‘ ಎಂದು ನೆನಪು ಮಾಡಿಕೊಂಡಿದ್ದಾರೆ.

‘ಪಾರ್ಲೆ–ಜಿ ಕೇವಲ ಬಿಸ್ಕಿತ್‌ ಅಲ್ಲ, ಭಾವನೆಗಳ ಆಗರ. 80–90 ದಶಕದ ಎಲ್ಲ ಮಕ್ಕಳ ಬಾಲ್ಯದ ಭಾವನಾತ್ಮಕ ನಂಟು‘ ಎಂದುಗೀತಾ ಧಾಮಿ ನೆನಪಿಸಿಕೊಂಡರೆ,‘ಬಾಲ್ಯದ ಮೊದಲ ಕ್ರಶ್ ಈ ಪಾರ್ಲೆ –ಜಿ ಮುದ್ದಾದ ಹುಡುಗಿ‌’ ಎಂದು ಸರ್ಕಾಸ್ಟಿಕ್ ಮಂತ್ರಿ ತಮ್ಮ ಮೊದಲ ಬೆಚ್ಚನೆಯ ಪ್ರೀತಿಯ ಅನುಭವ ತೆರೆದಿಟ್ಟಿದ್ದಾರೆ.ಹೀಗೆ ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ಈ ಕಂದು ಬಣ್ಣದ ‘ಪಾರ್ಲೆ–ಜಿ‘ ಬಿಸ್ಕಿತ್‌ ಜತೆಗಿನ ಬಾಲ್ಯದ ಭಾವನಾತ್ಮಕ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ.

ಇಂಥ ಖುಷಿಯ ನೆನಪುಗಳ ಮೆರವಣಿಗೆಯ ನಡುವೆ ಅರ್ಫೋಜ್ ಶಾ ಸೇರಿದಂತೆ ಕೆಲವು ಪರಿಸರ ತಜ್ಞರು ಮತ್ತು ಹೋರಾಟಗಾರರು ‘ಬಿಸ್ಕತ್ ಕಂಪೆನಿ ಪರಿಸರ ಸ್ನೇಹಿ ಪ್ಯಾಕೇಜಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳುವತ್ತ ಗಮನ ಹರಿಸಬೇಕು‘ ಎಂದು ಸಲಹೆ ನೀಡಿದ್ದಾರೆ.

ಅದೊಂದು ಪರಂಪರೆ...

‘ಈ ಬಿಸ್ಕಿತ್‌ ತಿನ್ನುತ್ತಲೇ ಬೆಳೆದವನು ನಾನು. ಚಹಾದಲ್ಲಿ ಅದ್ದಿ ತಿನ್ನುವ ಮಜಾನೇ ಬೇರೆ.‌ ಬೇರೆ ಯಾವ ಬಿಸ್ಕಿತ್‌ಗಳಿಂದಲೂ ಪಾರ್ಲೆ–ಜಿ ರುಚಿ ಸರಿಗಟ್ಟಲು ಸಾಧ್ಯವಿಲ್ಲ. ನನ್ನ ಮಗಳು ಕೂಡ ಈ ಪರಂಪರೆ ಮುಂದುವರೆಸಿದ್ದಾಳೆ’ ಎಂದು ದಿವ್ಯಾ ಸಿಂಘಾಲ್‌ ಬರೆದಿದ್ದಾರೆ.

‘ಈ ಬಿಸ್ಕಿತ್‌ ನನ್ನ ಜೀವನದ ಅವಿಭಾಜ್ಯ ಅಂಗ. ಸಂಜೆ ಟೀವಿಯಲ್ಲಿ ಟಾಮ್‌ ಅಂಡ್‌ ಜೆರಿ ನೋಡುತ್ತಾ ಬಿಸ್ಕಿತ್‌ ಸವಿಯುವ ಮಜಾ ಎಂದಿಗೂ ಮರೆಯಲಾಗದು. ಆ ಸಂತಸ ಬೇರೆ ಎಲ್ಲೂ ಸಿಗದು. ಪಾರ್ಲೆ–ಜಿ ಇಂದಿಗೂ ಅದೇ ರುಚಿ, ಗುಣಮಟ್ಟ ಮತ್ತು ಪ್ಯಾಕೆಟ್‌ ಉಳಿಸಿಕೊಂಡಿದೆ. ಅದಕ್ಕೆ ಅದನ್ನು ಮರೆಯಲಾಗದು’ ಎಂದು ಪ್ರಯಾಸ್ ಕೌಶಿಕ್‌ ನೆನಪಿಸಿಕೊಂಡಿದ್ದಾರೆ.

ಮಾರುಕಟ್ಟೆಯ ಪೈಪೋಟಿಯ ಭರಾಟೆಯಲ್ಲಿ ಕಳೆದು ಹೋಗಿದ್ದ ನಮ್ಮ ಪ್ರೀತಿಯ ಪಾರ್ಲೆ–ಜಿ ಮತ್ತೆ ಫಿನೀಕ್ಸ್‌ನಂತೆ ಎದ್ದು ಬಂದಿರುವುದು ಸಂತಸದ ವಿಷಯ. ಇದು ಕೇವಲ ಬಿಸ್ಕಿತ್‌ ಅಲ್ಲ, ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಮತ್ತು ಪರಂಪರೆಯ ಪ್ರತೀಕ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ದಿನವೂ ಸಾವಿರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬಿಸ್ಕಿತ್‌ ಜತೆಗಿನ ತಮ್ಮ ಪಯಣವನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಅವುಗಳನ್ನು ಓದುತ್ತ ಓದುತ್ತ ನಾವು ನಮ್ಮ ಬಾಲ್ಯದ ದಿನಗಳಿಗೆ ಜಾರಿ ಹೋಗುತ್ತೇವೆ. ಹಾಗಾಗಿ ಪಾರ್ಲೆ–ಜಿ ಕತೆ ಸದ್ಯ ಟಾಪ್‌ ಟ್ರಿಂಡಿಂಗ್‌ನಲ್ಲಿದೆ.

ಕೃತಜ್ಞತೆ ಹೇಳಿದ ಪಾರ್ಲೆ

ತಮ್ಮ ಬಿಸ್ಕಿತ್‌ ಕಂಪನಿ ಜತೆ ಇಂಥ ಭಾವನಾತ್ಮಕ ನಂಟು ಹೊಂದಿರುವ ಗ್ರಾಹಕರಿಗೆ ಪಾರ್ಲೆ–ಜಿ ಕಂಪನಿ ಕೃತಜ್ಞತೆ ಸಲ್ಲಿಸಿದೆ. ‘ಭಾರತ ಕಾ ಅಪ್ನಾ ಬಿಸ್ಕತ್’‌ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ಸಂಸ್ಥೆ ಸಂತಸ ವ್ಯಕ್ತಪಡಿಸಿದೆ. ಗ್ರಾಹಕರ ಈ ಬೆಲೆ ಕಟ್ಟಲಾಗದ ಪ್ರೀತಿ ಮತ್ತು ಅಭಿಮಾನದಿಂದಲೇ ಪಾರ್ಲೆ–ಜಿ ತನ್ನ 82 ವರ್ಷಗಳ ಇತಿಹಾಸದಲ್ಲಿಯೇ ಲಾಕ್‌ಡೌನ್‌ ಸಮಯದಲ್ಲಿ ಅತಿ ಹೆಚ್ಚು ಮಾರಾಟ ಕಂಡಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.