ADVERTISEMENT

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: ಟ್ರೆಂಡ್‌ ಆಯ್ತು #Boycott PhonePe

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2024, 11:06 IST
Last Updated 19 ಜುಲೈ 2024, 11:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಕಾಮೆಂಟ್‌ ಮಾಡಿದ್ದ ಫೋನ್‌ ಪೇ ಸಿಇಒ ಸಮೀರ್‌ ನಿಗಮ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ #boycott phonepe, #uninstallPhonepe ಎನ್ನುವ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಸೃಷ್ಟಿಸಿವೆ. 

‘ಕನ್ನಡಿಗರ ವಿರುದ್ಧವಾಗಿ ಮಾತನಾಡಿದ ಫೋನ್‌ ಪೇ ಸಿಇಒಗೆ ಬುದ್ದಿ ಕಲಿಸಬೇಕಿದೆ. ಫೋನ್‌ ಪೇಗೆ 1 ರೇಟಿಂಗ್‌ ನೀಡಿ ಮೊಬೈಲ್‌ನಿಂದ ಆ್ಯಪ್‌ ಡಿಲೀಟ್‌ ಮಾಡಿ’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

‘ಸ್ವದೇಶಿ ನಿರ್ಮಿತ ಆ್ಯಪ್‌ ಎಂದು ಫೋನ್‌ ಪೇ ಬಳಸುತ್ತಿದ್ದೆ. ಸಮೀರ್‌ ನಿಗಮ್‌ ಅವರೇ ನೀವು ಬೆಳೆಯಲು ಕರ್ನಾಟಕ ಬಹಳಷ್ಟು ಸಹಾಯ ಮಾಡಿದೆ, ನೀವು ನಿಮ್ಮ ವೃತ್ತಿ ಜೀವನವನ್ನು ಉತ್ತಮಗೊಳಿಸಲು ಬಂದಿದ್ದೀರಿ, ಬೆಂಗಳೂರನ್ನು ಬೆಳೆಸುವುದಕ್ಕೆ ಅಲ್ಲ. ಫೋನ್‌ ಪೇಗೆ ಗುಡ್‌ ಬೈ ಹೇಳುವ ಸಮಯ ಈಗ ಬಂದಿದೆ’ ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಫೋನ್‌ ಪೇ ಆ್ಯಪ್‌ ಅನ್ನು ಫೋನ್‌ನಿಂದ ಡಿಲೀಟ್‌ ಮಾಡುವ ಸ್ಕ್ರೀನ್‌ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

ADVERTISEMENT

ಸಮೀರ್‌ ನಿಗಮ್‌ ಹೇಳಿದ್ದೇನು?

ರಾಜ್ಯ ಸರ್ಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ನೀಡುವ ಬಗ್ಗೆ ಹೇಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಸಮೀರ್‌, ‘ನನಗೆ ಈಗ 46 ವರ್ಷ. 15 ವರ್ಷಕ್ಕಿಂತ ಹೆಚ್ಚು ಕಾಲ ಯಾವ ರಾಜ್ಯಗಳಲ್ಲಿಯೂ ಉಳಿದಿಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ನಿಯೋಜನೆ ಮಾಡುತ್ತಿದ್ದರು. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?. ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ, ದೇಶದಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?’ ಎಂದು ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.