ಕೊಚ್ಚಿ: ವಾಟ್ಸ್‌ಆ್ಯಪ್‌ಅನ್ನು ನಿಷೇಧಿಸುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ದೇಶದ ಕಾನೂನು ಜಾರಿ ಸಂಸ್ಥೆಯೊಂದಿಗೆ ವಾಟ್ಸ್‌ಆ್ಯಪ್ ಸಹಕರಿಸುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಇಡುಕ್ಕಿ ಜಿಲ್ಲೆಯ ಓಮನಕುಟ್ಟನ್ ಕೆ. ಜಿ. ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ. ‘ತ್ವರಿತ ಸಂದೇಶ ರವಾನೆ ಆ್ಯಪ್ ಆಗಿರುವ ವಾಟ್ಸ್ ಆ್ಯಪ್ ಯುರೋಪಿಯನ್ ದೇಶಗಳಲ್ಲಿ ಪ್ರತ್ಯೇಕ ಗೌಪ್ಯತೆ ನೀತಿಯನ್ನು ಹೊಂದಿದೆ. ಅದು ಅಲ್ಲಿ ಜಾರಿಯಲ್ಲಿರುವ ಕಾನೂನುಗಳಿಗೆ ಅನುಗುಣವಾಗಿದೆ,’ ಎಂದು ಹೇಳಿದ್ದಾರೆ.
‘ಯುರೋಪಿಯನ್ ದೇಶಗಳ ಕಾನೂನುಗಳಿಗೆ ಅನುಕೂಲಕರವಾಗಿ ವಾಟ್ಸ್‌ಆ್ಯಪ್‌ನ ಗೌಪ್ಯತೆ ನೀತಿ ಇರಬಹುದಾದರೆ, ಅಲ್ಲಿನ ಕಾನೂನಿಗೆ ಅನುಗುಣವಾಗಿ ತನ್ನ ಕಾರ್ಯವನ್ನು ಬದಲಿಸಿಕೊಳ್ಳಬಹುದಾಗಿದ್ದರೆ, ನಮ್ಮ ದೇಶದ ಕಾನೂನುಗಳಿಗೆ ಬದ್ಧವಾಗಿರಲು ವಾಟ್ಸ್‌ಆ್ಯಪ್ ಏಕೆ ಹಿಂಜರಿಯುತ್ತದೆ?’ ಎಂದು ಓಮನಕುಟ್ಟನ್ ಅರ್ಜಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಗೂಢಲಿಪಿ ನೀತಿ ಜಾರಿಯಲ್ಲಿರುವುದರಿಂದ ಸಂದೇಶಗಳ ಗೌಪ್ಯತೆ ಹರಣ ಅಸಾಧ್ಯ ಎಂದು ಹೇಳಿರುವ ವಾಟ್ಸ್‌ಆ್ಯಪ್, ದೇಶದಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಐಟಿ ನಿಯಮಗಳು ಸೂಕ್ತವಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ ಎಂಬುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲಿ ಸುರಕ್ಷತೆ ಕೊರತೆಯಿದೆ ಎಂದು ಅರ್ಜಿದಾರ ವಾದಿಸಿದ್ದಾರೆ. ಅಲ್ಲದೇ, ರಾಷ್ಟ್ರ ವಿರೋಧಿ ಮತ್ತು ಸಮಾಜ ವಿರೋಧಿಗಳು ಅವರ ಚಟುವಟಿಕೆಗಳಿಗಾಗಿ ವಾಟ್ಸ್‌ಆ್ಯಪ್ ಅನ್ನು ಬಳಸುತ್ತಿದ್ದಾರೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅರ್ಜಿಯನ್ನು ಸಲ್ಲಿಸುತ್ತಿರುವುದಾಗಿ ಅರ್ಜಿದಾರ ಓಮನ್‌ಕುಟ್ಟನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.