ಬೆಂಗಳೂರು: ತುಂಬಾ ಕಷ್ಟಪಟ್ಟು ಈ ವಿಡಿಯೊ ಹುಡುಕಿದ್ದೇನೆ.1998ರಲ್ಲಿ ಸಂದರ್ಶನವೊಂದರಲ್ಲಿ ಮೋದಿಯವರೇ ಹೇಳಿದ್ದಾರೆ ಅವರು ಓದಿದ್ದು ಹೈಸ್ಕೂಲ್ ವರೆಗೆ ಎಂದು. ಆದರೆ ಇಂದುಸಾಹೇಬರು ತಾನು 1979ರಲ್ಲಿ ಪದವಿ ಪೂರೈಸಿದ್ದೇನೆ ಎಂದು ಹೇಳುತ್ತಿದ್ದಾರೆ!! ಎಂಬ ಒಕ್ಕಣೆಯೊಂದಿಗೆ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದರು. ಮಂಗಳವಾರ ರಮ್ಯಾ ಮಾಡಿದ ಈ ಟ್ವೀಟ್ 3,600ಕ್ಕಿಂತಲೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.
ಮೋದಿ ಹೈಸ್ಕೂಲ್‍ವರೆಗೆ ಮಾತ್ರ ಓದಿದ್ದು ಎಂದು ಹೇಳುತ್ತಿರುವ ವಿಡಿಯೊದ ತುಣುಕನ್ನು ರಮ್ಯಾ ಶೇರ್ ಮಾಡಿದ್ದು, ಈ ವಿಡಿಯೊ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಮೋದಿ ಸಂದರ್ಶನವಿಡಿಯೊದ ತುಣುಕು ಇದಾಗಿದ್ದು ನವೆಂಬರ್ 2015ರಲ್ಲಿ ಇದೇ ವಿಡಿಯೊ ಶೇರ್ ಆಗಿತ್ತು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ಮೋದಿ ಸಂದರ್ಶನದ ಪೂರ್ತಿ ವಿಡಿಯೊ ನೋಡಿದರೆ, ಅದರಲ್ಲಿ ಮೋದಿ ಮಾತು ಹೀಗೆ ಮುಂದುವರಿಯುತ್ತದೆ. ಹೈಸ್ಕೂಲ್ ವರೆಗೆ ಕಲಿತೆ. ಆಮೇಲೆ ತತ್ಸಮಾನ ಪರೀಕ್ಷೆ ಬರೆದು ಬಿ.ಎ ಮತ್ತು ಎಂ.ಎ ಪದವಿ ಪೂರೈಸಿದೆ ಎಂದು ಹೇಳುತ್ತಾರೆ.
ಆಲ್ಟ್ ನ್ಯೂಸ್ ಒರಿಜಿನಲ್ ವಿಡಿಯೊವನ್ನು ಪೋಸ್ಟ್ ಮಾಡಿದ ನಂತರ ರಮ್ಯಾ ತಮ್ಮ ತಪ್ಪನ್ನು ಮನವರಿಕೆ ಮಾಡಿಕೊಂಡು ಆಲ್ಟ್ ನ್ಯೂಸ್ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ. ಆದರೆ ಹಳೇ ಟ್ವೀಟ್ ಡಿಲೀಟ್ ಮಾಡಿಲ್ಲ.
ಎಐಸಿಸಿ ಜಂಟಿ ಕಾರ್ಯದರ್ಶಿ ಮತ್ತು ಎನ್‍ಎಸ್‍ಯುಐ ಉಸ್ತುವಾರಿ ವಹಿಸಿರುವ ರುಚಿ ಗುಪ್ತಾ ಕೂಡಾ ಇದೇ ವಿಡಿಯೊವನ್ನು 2018 ಸೆಪ್ಟೆಂಬರ್ 17ರಂದು ಶೇರ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.