ಬೆಂಗಳೂರು: ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಬಂದಿದ್ದಾರೆ.
ಬೆಳಿಗ್ಗೆ 7.35ರ ಸುಮಾರಿಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
7.50ಕ್ಕೆ ತೆರೆದ ಜೀಪ್‌ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದ ಅವರು ಎರಡು ಗಂಟೆಗಳ ಕಾಲ ಬಂಡೀಪುರ ಅರಣ್ಯದಲ್ಲಿ ಸಂಚರಿಸಿ, ಪ್ರಕೃತಿ ಸೌಂದರ್ಯ ಸವಿದರು.
ಪ್ರಧಾನಿ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ #Tigerinkarnataka ಹ್ಯಾಶ್‌ಟ್ಯಾಗ್ ಟ್ರೆಂಡ್ ಆಯ್ತು ಆಗಿದೆ.
‘ನಮ್ಮ ಅತ್ಯಂತ ಪ್ರೀತಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಸ್ವಾಗತಿಸುತ್ತದೆ. ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಬಂಡೀಪುರಕ್ಕೆ ಬಂದಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹುಲಿ ಸಂರಕ್ಷಣಾ ಕಾರ್ಯವು ತೀವ್ರ ಹೆಚ್ಚಳಕ್ಕೆ ಸಾಕ್ಷಿಯಾಗಿದೆ’ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಭವ್ಯ ದೃಷ್ಟಿಕೋನ ಮತ್ತು ಕ್ರಿಯಾತ್ಮಕ ವಿಧಾನದಿಂದಾಗಿ ಭಾರತದಲ್ಲಿ ಹುಲಿಗಳಿಗೆ ಹೆಚ್ಚಿನ ರಕ್ಷಣೆ ಮತ್ತು ಬೆಳವಣಿಗೆಯನ್ನು ಖಾತ್ರಿಪಡಿಸಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
‘50 ವರ್ಷಗಳ ರೋಚಕ ಯಶಸ್ಸು! ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಉತ್ಸಾಹದಲ್ಲಿ ಮುಳುಗಿದ್ದಾರೆ. ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಅವರು ಬಂಡೀಪುರಕ್ಕೆ ಬಂದಿರುವುದು ಸಂತಸ ತರಿಸಿದೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ಬೊಮ್ಮ –ಬೆಳ್ಳಿ ದಂಪತಿ ಕಾರ್ಯಕ್ಕೆ ಮೆಚ್ಚುಗೆ
ಗುಂಡ್ಲುಪೇಟೆ: ಬಂಡೀಪುರ ಸಫಾರಿ ಮುಗಿಸಿಕೊಂಡು ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಕರ್ ಪ್ರಶಸ್ತಿ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರದಲ್ಲಿರುವ ಕಾವಾಡಿ ದಂಪತಿ, ಬೊಮ್ಮ-ಬೆಳ್ಳಿ ಅವರೊಂದಿಗೆ ಆತ್ಮೀಯವಾಗಿ ಬೆರೆತರು.
10.30ಕ್ಕೆ ಆನೆ ಶಿಬಿರ ತಲುಪಿದ ಮೋದಿ, ಶಿಬಿರದಲ್ಲಿರುವ ಆನೆಗಳನ್ನು ವೀಕ್ಷಿಸಿದರು. ರಾಣಿ ಎಂಬ ಹೆಸರಿನ ಆನೆಗೆ ಕಬ್ಬು ಕೊಟ್ಟು ಸೊಂಡಿಲು ಸವರಿದರು.
ಆನೆ ಪಾಲಕರಾದ ಕಿರುಮಾರನ್, ಕುಳ್ಳನ್ ಮತ್ತು ದೇವನ್ ಎಂಬುವವರ ಜೊತೆಗೆ ಮಾತನಾಡಿ, ಆನೆಗಳನ್ನು ಪಾಲನೆ ಮಾಡುವ ಬಗ್ಗೆ ಮಾಹಿತಿ ಪಡೆದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.