ADVERTISEMENT

ಕಣ್ಗಾವಲಿನ ಬಂಡವಾಳವಾದ: ಖಾಸಗಿತನ ಸುರಕ್ಷತೆಗೆ ಹಾದಿ ಯಾವುದು?

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:30 IST
Last Updated 26 ನವೆಂಬರ್ 2022, 19:30 IST
ಕಣ್ಗಾವಲಿನ ಒಳನೋಟಗಳು – ಸಾಂದರ್ಭಿಕ ಚಿತ್ರ
ಕಣ್ಗಾವಲಿನ ಒಳನೋಟಗಳು – ಸಾಂದರ್ಭಿಕ ಚಿತ್ರ   

ನಮ್ಮ ಖಾಸಗಿ ಮಾಹಿತಿ ಎಗ್ಗಿಲ್ಲದೆ ಸೋರಿಕೆಯಾಗುತ್ತಿದ್ದು ಅದರಿಂದ ಹೊಸ ಬಗೆಯ ಕಣ್ಗಾವಲಿನ ಬಂಡವಾಳವಾದವನ್ನು ಹುಟ್ಟುಹಾಕಿದ ಆತಂಕ ಈಗ ಎಲ್ಲೆಡೆ ಮನೆಮಾಡಿದೆ. ‘ಚಿಲುಮೆ’ ಪ್ರಕರಣ ಆ ಆತಂಕಕ್ಕೆ ಮತ್ತಷ್ಟು ಪುಷ್ಟಿ ಒದಗಿಸಿದೆ. ಈ ಕಣ್ಗಾವಲು ನಮ್ಮನ್ನು ಎಲ್ಲಿಗೆ ಹೋಗಿ ಮುಟ್ಟಿಸೀತು? ಮಾಹಿತಿ ಸೋರಿಕೆಯಿಂದ ಏನೆಲ್ಲ ಎಡವಟ್ಟುಗಳು ಆದಾವು? ಮತ್ತೆ ಖಾಸಗಿತನದ ಸುರಕ್ಷತೆಗೆ ಇರುವ ಹಾದಿಯಾದರೂ ಯಾವುದು?

***

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮತದಾರರ ದತ್ತಾಂಶ ಕಳುವು ಮತ್ತು ಮಾರಾಟದ ‘ಚಿಲುಮೆ’ ಪ್ರಕರಣವು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಳಕೆದಾರರ ಖಾಸಗಿ ಮಾಹಿತಿಯ ಸುರಕ್ಷತೆಯ ಬಗ್ಗೆ ಹಲವು ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆ್ಯಪ್‌ ಆಧಾರಿತ ಸೇವೆ ನೀಡುವ ತಂತ್ರಜ್ಞಾನ ಕಂಪನಿಗಳು, ತಮ್ಮಲ್ಲಿ ಶೇಖರವಾಗುವ ಬಳಕೆದಾರರ ಖಾಸಗಿ ಮಾಹಿತಿಯನ್ನು, ಅವರ ಸಮ್ಮತಿಯೊಂದಿಗೆ ಹೊರದೇಶಗಳಿಗೆ ವರ್ಗಾಯಿಸಲು ಅವಕಾಶ ಕಲ್ಪಿಸುವ ಪ್ರಸ್ತಾವವೊಂದು ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ದತ್ತಾಂಶ ಸಂರಕ್ಷಣಾ ಮಸೂದೆಯಲ್ಲಿದೆ. ಹೀಗಾಗಿ ಮಾಹಿತಿ ಸುರಕ್ಷತೆ ಕುರಿತ ಆತಂಕ ಇನ್ನೂ ಹೆಚ್ಚಾಗುವಂತೆ ಮಾಡಿದೆ.

ADVERTISEMENT

ಫೇಸ್‍ಬುಕ್, ವಾಟ್ಸ್‌ಆ್ಯಪ್, ಟ್ವಿಟರ್, ಇನ್‍ಸ್ಟಾಗ್ರಾಂನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮಗಳು ಈಗಾಗಲೇ ಬಳಕೆದಾರರ ಖಾಸಗಿ ಮಾಹಿತಿಯನ್ನು ಲಾಭದ ಉದ್ದೇಶದಿಂದ ವಿವಿಧ ಕಂಪನಿಗಳಿಗೆ ಮಾರಾಟ ಮಾಡಿರುವ ಸಾಧ್ಯತೆ ಇದ್ದು, ಇದು ಉತ್ಪನ್ನಗಳ ಟಾರ್ಗೆಟೆಡ್ ಮಾರ್ಕೆಟಿಂಗ್‍ಗೆ ಬಳಕೆಯಾಗುತ್ತಲಿದೆ. ಬಳಕೆದಾರರ ಸಮ್ಮತಿಯಿಂದ ಅವರ ಖಾಸಗಿ ಮಾಹಿತಿಯನ್ನು ವಿದೇಶಗಳಿಗೆ ವರ್ಗಾಯಿಸಲು ಡಿಜಿಟಲ್ ಕಂಪನಿಗಳಿಗೆ ಅವಕಾಶ ನೀಡಲು ಸರ್ಕಾರವೇ ಮುಂದಾಗಿದ್ದರಿಂದ ಗೂಗಲ್, ಮೆಟಾ, ಟ್ವಿಟರ್‌ನಂತಹ ಬೃಹತ್ ಟೆಕ್ ಕಂಪನಿಗಳು ಸದ್ಯದ ಮಟ್ಟಿಗೆ ಕಾನೂನಿನ ಭಯದಿಂದ ಮುಕ್ತವಾಗಿವೆ.

ಸಾಂಸ್ಕೃತಿಕ ರಾಜಕಾರಣದ ಪೊಳ್ಳು ವಿಚಾರಗಳಿಗೆ ಪ್ರಬಲವಾದ ನಂಬಿಕೆಯ ಪ್ಯಾಕೇಜಿಂಗ್ ಮಾಡಿ ನಯವಾಗಿ ಪ್ರಸ್ತುತಪಡಿಸುವ ಕ್ರಿಯಾಶೀಲ ಪೋಸ್ಟ್‌ಗಳು, ಮೀಮ್‍ಗಳ ಯೋಜಿತ ಪ್ರಚಾರದ ಮೂಲಕ ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಚಾರಗಳನ್ನೊಳಗೊಂಡ ಆಧುನಿಕ ಮಿತ್‌ಗಳನ್ನು ಫೇಸ್‍ಬುಕ್, ಟ್ಟಿಟರ್, ವಾಟ್ಸ್‌ಆ್ಯಪ್‌ಗಳಂತಹ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಸೃಷ್ಟಿಸಲಾಗುತ್ತಿದೆ.

ಇತಿಹಾಸದ ಸತ್ಯಗಳನ್ನು ಅನುಕೂಲಸಿಂಧು ರಾಜಕಾರಣದ ಚೌಕಟ್ಟಿಗೆ ಅನುಗುಣವಾಗಿ ತಿರುಚಿ ವೈಭವೀಕರಿಸುವುದು ಮತ್ತು ಏಕರೂಪದ ಮೂಸೆಯಲ್ಲಿ ವಿವಿಧ ಸಾಂಸ್ಕೃತಿಕ, ಸಾಮುದಾಯಿಕ ಆಚರಣೆಗಳನ್ನು ಅದ್ದಿ ತೆಗೆಯುವುದರ ಮೂಲಕ ಹಳೆಯ ಮಿತ್‌ಗಳನ್ನು ಪ್ರಶ್ನಾತೀತ ಐತಿಹಾಸಿಕ ಸತ್ಯಗಳೆಂದು ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ, ಇವುಗಳನ್ನು ಖಾಸಗಿ ಮಾಹಿತಿಯನ್ನಾಧರಿಸಿದ ಅನಾಲಿಟಿಕ್ಸ್ ಮೂಲಕ ಬಳಕೆದಾರರಿಗೆ ನೇರವಾಗಿ ತಲುಪಿಸಲಾಗುತ್ತಿದೆ. ಈ ಪೋಸ್ಟ್‌ಗಳು, ವಾಟ್ಸ್‌ಆ್ಯಪ್‌ ಸಂದೇಶಗಳು, ಮೀಮ್‍ಗಳು, ಟ್ರೋಲ್‍ಗಳು ಸಮಾನತೆ ಮತ್ತು ಸಹಬಾಳ್ವೆಯ ಬೇರುಗಳನ್ನು ಅಲುಗಾಡಿಸುತ್ತಿವೆ. ಬಳಕೆದಾರರ ಸಾಮಾಜಿಕ ಜಾಲತಾಣಗಳ ಖಾಸಗಿ ಪುಟಗಳಲ್ಲಿ ಹಠಾತ್ತನೇ ಕಾಣಿಸಿಕೊಳ್ಳುವ ಇಂಥ ಯೋಜಿತ ಪ್ರಚಾರವನ್ನು ಮತ್ತು ಹಸಿಸುಳ್ಳುಗಳ ಮಿತ್‌ಗಳನ್ನು ಸಮರ್ಪಕವಾಗಿ ತಡೆಗಟ್ಟಲು ಈ ಬೃಹತ್ ಡಿಜಿಟಲ್ ಕಂಪನಿಗಳು ಕೈಗೊಂಡಿರುವ ಕ್ರಮಗಳಾದರೂ ಏನು?

ಫೇಸ್‍ಬುಕ್ ಅಥವಾ ಮೆಟಾ ಸಂಸ್ಥೆಯ ನಿರ್ವಹಣಾ ಮಾದರಿಯನ್ನು ವಿಶ್ಲೇಷಿಸುತ್ತಾ ನೊಬೆಲ್ ಪುರಸ್ಕೃತ ಪತ್ರಕರ್ತೆ ಮಾರಿಯಾ ರೆಸ್ಸಾ ಹೇಳುತ್ತಾರೆ, ‘ಫೇಸ್‍ಬುಕ್ ಈಗ ಜಗತ್ತಿನ ಅತಿದೊಡ್ಡ ಸುದ್ದಿ ಜಾಲತಾಣವಾಗಿದೆ. ಆದರೆ ಇಲ್ಲಿ ದ್ವೇಷಭರಿತ ಹಸಿಸುಳ್ಳುಗಳು ಹರಡುವಷ್ಟು ವೇಗವಾಗಿ ಸತ್ಯಗಳು ಹರಡುವುದಿಲ್ಲ.’ ಜಾಗತಿಕ ಮಾಹಿತಿಯ ವ್ಯವಸ್ಥಿತ ಜಾಲವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಅಮೆರಿಕ ಮೂಲದ ಈ ಪ್ರಬಲ ಕಾರ್ಪೊರೇಟ್‌ಗಳು ಸುಳ್ಳುಸುದ್ದಿ, ದ್ವೇಷಭರಿತ ಸಂದೇಶಗಳು ಹರಡದಂತೆ ತಡೆಗಟ್ಟುವಲ್ಲಿ ಸೋತಿವೆಯೇ ಅಥವಾ ಹಂಚಿಕೊಳ್ಳಲು ಎಗ್ಗಿಲ್ಲದೆ ಅವಕಾಶ ನೀಡುತ್ತಿವೆಯೇ ಎಂಬ ಅನುಮಾನ ಮೂಡದಿರದು.

ಫೇಸ್‍ಬುಕ್, ವಾಟ್ಸ್‌ಆ್ಯಪ್ ಮತ್ತು ಟ್ವಿಟರ್‌ಗಳಂಥ ಸಾಮಾಜಿಕ ಮಾಧ್ಯಮಗಳು ಬಳಕೆದಾರರ ಖಾಸಗಿ ದತ್ತಾಂಶವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರದ ಮತ್ತು ಲಾಭದಾಯಕ ಮಾರುಕಟ್ಟೆ ತಂತ್ರಗಾರಿಕೆಯ ವೇದಿಕೆಗಳಾಗಿ ಪರಿಣಮಿಸಿವೆ. ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮತ್ತು ಚಿಂತಕಿ ಶೊಶಾನ ಜುಬೋಫ್ ‘ದಿ ಏಜ್ ಆಫ್ ಸರ್ವೇಲೆನ್ಸ್ ಕ್ಯಾಪಿಟಲಿಸಂ’ ಕೃತಿಯಲ್ಲಿ ಇದನ್ನು ಕಣ್ಗಾವಲಿನ ಬಂಡವಾಳವಾದ ಎಂದು ಗುರುತಿಸಿದ್ದಾರೆ.

ಇದು ನಮ್ಮ ಬದುಕಿನ ಮಧುರ ಕ್ಷಣಗಳನ್ನು ನಮ್ಮ ಸಹಮತದೊಂದಿಗೇ ಕಾರ್ಪೊರೇಟ್‌ಗಳಿಗೆ ಅಡಮಾನಕ್ಕಿಡುವ ಕಣ್ಗಾವಲಿನ ಬಂಡವಾಳವಾದ. ನಮ್ಮ ವೈಯುಕ್ತಿಕ ಅನುಭವಗಳನ್ನು ಹೆಕ್ಕಿ ತೆಗೆದು ಕೃತಕ ಬುದ್ಧಿಮತ್ತೆಯ (ಎ.ಐ.) ಹಿಡಿತದಲ್ಲಿರುವ ಡೇಟಾಬೇಸ್ ಸಿದ್ಧಪಡಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಹರಾಜಿಗಿಡುವ ಕಣ್ಗಾವಲಿನ ಬಂಡವಾಳವಾದ. ನಮ್ಮ ಯೋಚನಾ ಲಹರಿ, ಮನೋಧರ್ಮ, ತರ್ಕ, ಟೀಕೆ ಟಿಪ್ಪಣಿಗಳೆಲ್ಲವನ್ನೂ ವ್ಯವಸ್ಥಿತವಾಗಿ ಬದಲಾಯಿಸುವ ಮನವೊಲಿಕೆಯ ಬಂಡವಾಳವಾದ. ಸ್ವಲ್ಪ ಯೋಚಿಸುವಷ್ಟು ವ್ಯವಧಾನವೂ ಇಲ್ಲದಂತೆ ಮಾಡಿರುವ ಲಾಭದಾಯಕ ಮೈಕ್ರೋಟಾರ್ಗೆಟಿಂಗ್ ಎಂಬ ಈ ದಂಧೆ, ನಮ್ಮೆಲ್ಲರನ್ನೂ ‘ಪ್ಯಾವ್ಲಾವ್‍ನ ನಾಯಿ’ಗಳನ್ನಾಗಿ ಮಾಡುವುದನ್ನೇ ಮೂಲ ಉದ್ದೇಶವನ್ನಾಗಿ ಹೊಂದಿದೆ’ ಎನ್ನುತ್ತಾರೆ ಮಾರಿಯಾ ರೆಸ್ಸಾ.

ಲಾಭದಾಯಕ ಮಾರ್ಕೆಟಿಂಗ್‍ಗಾಗಿ ಖಾಸಗಿತನವನ್ನು ಉತ್ಪನ್ನವನ್ನಾಗಿಸುವ ಈ ನಯವಂಚಕ ಆರ್ಥಿಕತೆಯಲ್ಲಿ ಗೂಗಲ್, ಅಮೆಜಾನ್, ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂ, ಸ್ನ್ಯಾಪ್‍ಚಾಟ್‍ನಂತಹ ಜನಪ್ರಿಯ ಸಾಮಾಜಿಕ ಜಾಲತಾಣಗಳು, ಇ–ಕಾಮರ್ಸ್ ಕಂಪನಿಗಳು ಮತ್ತು ಆ್ಯಂಡ್ರಾಯ್ಡ್, ಐಒಎಸ್ ವೇದಿಕೆಗಳಲ್ಲಿ ಮುಕ್ತವಾಗಿ ಲಭ್ಯವಿರುವ ಲೆಕ್ಕವಿಲ್ಲದಷ್ಟು ಆ್ಯಪ್‍ಗಳಿಗೆ ಬಳಕೆದಾರರ ಖಾಸಗಿತನವೇ ಬಂಡವಾಳ. ಖಾಸಗಿ ಮಾಹಿತಿಯನ್ನು ಬಳಸಿ ಗ್ರಾಹಕರ ಆಸಕ್ತಿಗೆ ತಕ್ಕಂತೆ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ರಹದಾರಿಯನ್ನು ಅನಾಲಿಟಿಕ್ಸ್ ಮೂಲಕ ತೋರಿಸಿಕೊಟ್ಟ ಗೂಗಲ್ ಆ್ಯಡ್‍ವರ್ಡ್ಸ್‌ ಇತರ ಎಲ್ಲ ಟೆಕ್ ಕಂಪನಿಗಳಿಗೆ ಮಾದರಿಯಾಯಿತು. ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್‍ಇಒ), ಮೈಕ್ರೋಟಾರ್ಗೆಟಿಂಗ್, ಎ.ಐ. ಆಧಾರಿತ ಆಲ್ಗಾರಿದಂನ ಅನಾಲಿಟಿಕ್ಸ್, ಈ ಕಣ್ಗಾವಲಿನ ಬಂಡವಾಳವಾದದ ಪ್ರಮುಖ ಲಕ್ಷಣಗಳು.

ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ನಾವೇ ನಮ್ಮ ಖಾಸಗಿ ಮಾಹಿತಿ ಹಂಚಿಕೊಂಡು ಶರಣಾಗತರಾಗಿಬಿಟ್ಟಿದ್ದೇವೆ. ನೂರಾರು ದೊಡ್ಡಣ್ಣಗಳ ಕಣ್ಗಾವಲಿನಲ್ಲಿರಲು ನಾವೇ ಸಮ್ಮತಿ ನೀಡಿದ್ದೇವೆ. ಇದರಲ್ಲಿ ದೇಶಿ, ವಿದೇಶಿ ಎಂಬ ತಾರತಮ್ಯವಿಲ್ಲ. ಗೌಪ್ಯತೆ, ಖಾಸಗಿತನವೆಲ್ಲವನ್ನೂ ಶಾಸನಬದ್ಧವಾಗಿ ಒಪ್ಪಿಕೊಂಡೇ ಹಂಚಿಕೊಂಡಿದ್ದೇವೆ. ಆದರೆ, ಅಮೆರಿಕ ಮೂಲದ ಬಹುತೇಕ ಸಾಮಾಜಿಕ ಜಾಲತಾಣಗಳು ಮತ್ತು ಆ್ಯಪ್‍ಗಳು ಈ ನೆಲದ ಕಾನೂನಿನ ವ್ಯಾಪ್ತಿಗೆ ಒಳಪಡುವುದೇ ಇಲ್ಲ! ಈಗ ಮಂಡಿಸಲಾಗಿರುವ ಡಿಜಿಟಲ್ ದತ್ತಾಂಶ ಸಂರಕ್ಷಣಾ ಮಸೂದೆ ಕೂಡ, ಈ ಕಂಪನಿಗಳು ನಿರಾಳವಾಗುವಂತೆ ಮಾಡಿದೆ.

ಕರ್ನಾಟಕದ ಯಾವುದೋ ಪಟ್ಟಣದಲ್ಲಿಯೋ, ಹಳ್ಳಿಯಲ್ಲಿಯೋ ವಾಸವಿರುವ ವ್ಯಕ್ತಿಯೊಬ್ಬನ ಖಾಸಗಿ ಮಾಹಿತಿ ಅಮೇಜಾನ್, ಕೇಂಬ್ರಿಡ್ಜ್ ಅನಾಲಿಟಿಕಾದಂತಹ ಕಂಪನಿಗಳಿಗೆ ಮಾರಾಟವಾಗಿರುವ ಸಾಧ್ಯತೆಯಿರುತ್ತದೆ. 2018ರಲ್ಲಿ ಕ್ರಿಸ್ಟೋಫರ್ ವೈಲಿ ಎಂಬ ಸೊಲ್ಲಿಗ (Whistleblower) ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಫೇಸ್‍ಬುಕ್, 2010ರಲ್ಲಿಯೇ ಲಕ್ಷಾಂತರ ಮಂದಿ ಅಮೆರಿಕನ್ನರ ಖಾಸಗಿ ಮಾಹಿತಿಯನ್ನು ಕೇಂಬ್ರಿಡ್ಜ್ ಅನಾಲಿಟಿಕಾಕಂಪನಿಗೆಮಾರಾಟ ಮಾಡಿದ್ದನ್ನು ಬಹಿರಂಗಪಡಿಸಿದ್ದ.

ಈ ಮಾಹಿತಿಯನ್ನು ಆಧರಿಸಿ ಒಂದು ಮಾನಸಿಕ ಸಮರ ಸಾಧನವನ್ನು ಸಿದ್ಧಪಡಿಸಿ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಿ ಅಮೆರಿಕದ ಮತದಾರರು ಡೊನಾಲ್ಡ್ ಟ್ರಂಪ್ ಅವರನ್ನು ಆಯ್ಕೆ ಮಾಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದು ಜಗತ್ತಿನ ಮೊತ್ತಮೊದಲ ದತ್ತಾಂಶ ಹಗರಣವೆಂದೇ ಈಗ ಕುಖ್ಯಾತ.

ಭಾರತದಲ್ಲಿ ನಡೆಯುವ ಚುನಾವಣೆಗಳಲ್ಲಿ ಕೂಡ ಈ ಮಾದರಿ ಬಳಕೆಯಾದರೆ ಆಶ್ಚರ್ಯಪಡಬೇಕಿಲ್ಲ. ಆದರೆ, ಮಾರ್ಕ್ ಜುಕರ್‌ಬರ್ಗ್‌ನಂಥ ಪ್ರಭಾವಿ ಟೆಕ್ ನಾಯಕನನ್ನು ಭಾರತದಂಥ ದೇಶಗಳಲ್ಲಿ ವಿಚಾರಣೆಗೆ ಒಳಪಡಿಸಲು ಸಾಧ್ಯವಿದೆಯೇ? 2018ರಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾದ ಮಾಹಿತಿ ಹಂಚಿಕೆಯ ಹಗರಣದ ಸಂಬಂಧ ಜುಕರ್‌ಬರ್ಗ್ ಅಮೆರಿಕದ ಕಾಂಗ್ರೆಸ್‍ನ ವಿಚಾರಣೆ ಎದುರಿಸಿದ್ದು ಮತ್ತು ವಿಚಾರಣೆ ವೇಳೆ ಸ್ವತಃ ಒಪ್ಪಿಕೊಂಡ ಸತ್ಯಗಳನ್ನು ನಾವು ಮರೆಯುವಂತಿಲ್ಲ.

‘ನನ್ನಿಂದ ತಪ್ಪಾಗಿದೆ, ಕ್ಷಮಿಸಿ. ಫೇಸ್‍ಬುಕ್ ಆರಂಭಿಸಿದ್ದು ನಾನು, ಇಲ್ಲಿ ನಡೆಯುವುದಕ್ಕೆಲ್ಲವೂ ನಾನೇ ಹೊಣೆಗಾರ. ಸುಳ್ಳು ಸುದ್ದಿಯ ಹರಡುವಿಕೆ, ಚುನಾವಣಾ ಸಮಯದಲ್ಲಿ ವಿದೇಶಿ ಹಸ್ತಕ್ಷೇಪ, ದ್ವೇಷ ಭಾಷಣ ಮತ್ತು ಮಾಹಿತಿ ಗೌಪ್ಯತೆಯ ದುರ್ಬಳಕೆಗೆ ಫೇಸ್‍ಬುಕ್ ಬಳಕೆಯಾಗುತ್ತಿರುವುದನ್ನು ತಡೆಗಟ್ಟುವಲ್ಲಿ ನನ್ನ ಪ್ರಯತ್ನ ಸಾಲದೆಂದು ನನಗೀಗ ಸ್ಪಷ್ಟವಾಗಿದೆ’ ಎಂಬ ಆತನ ಹೇಳಿಕೆ ತಾಂತ್ರಿಕ ತೊಡಕಿನಿಂದ ಉಂಟಾದ ಅಸಹಾಯಕತನವೇ ಅಥವಾ ಗೊತ್ತಿದ್ದೇ ಮಾಡಿದ ಅನೈತಿಕ ಮಾರುಕಟ್ಟೆ ತಂತ್ರಗಾರಿಕೆಯೇ?

ಈ ಕಣ್ಗಾವಲಿನ ಬಂಡವಾಳಶಾಹಿಯ ರತ್ನಗಳು ಈಗ ಸುದ್ದಿಯನ್ನು ಹಂಚುವ, ವೈರಲ್ ಮಾಡುವ ಪ್ರಮುಖ ವೇದಿಕೆಗಳಾಗಿವೆ. ಸುದ್ದಿ ಪತ್ರಿಕೆಗಳು, ನಿಯತಕಾಲಿಕೆಗಳು, ಟಿ.ವಿ. ವಾಹಿನಿಗಳಿಗಿಂತ ವೇಗವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಜಗತ್ತಿನೆಲ್ಲೆಡೆ ವಿವಿಧ ಸಾರ್ವಭೌಮ ರಾಷ್ಟ್ರಗಳ ಆಂತರಿಕ ವಿಚಾರಗಳೆಲ್ಲವೂ ಅಮೆರಿಕ ಮೂಲದ ಈ ಟೆಕ್ ಮೊಘಲ್‍ಗಳ ನಿಯಂತ್ರಣದಲ್ಲಿರುವ ವೇದಿಕೆಗಳಲ್ಲಿ ಹಂಚಿಕೆಯಾಗುತ್ತಲಿವೆ.

ಮಾರಿಯಾ ರೆಸ್ಸಾ ಹೇಳುವಂತೆ, ಈ ಕಾರ್ಪೊರೆಟ್ ಕಂಪನಿಗಳು ಭಾರತ, ಶ್ರೀಲಂಕಾ, ಮ್ಯಾನ್ಮಾರ್ ಮತ್ತಿತರ ದೇಶಗಳಲ್ಲಿ ಸಾಂಪ್ರದಾಯಿಕ ಸುದ್ದಿ ಮಾಧ್ಯಮ ಸಂಸ್ಥೆಗಳ ಆದಾಯಕ್ಕೆ ಕತ್ತರಿ ಹಾಕುತ್ತಿರುವುದಷ್ಟೇ ಅಲ್ಲದೆ ಮಾರುಕಟ್ಟೆಗಳು ಮತ್ತು ಚುನಾವಣೆಗಳ ಅಡಿಪಾಯಗಳನ್ನೇ ಅಲುಗಾಡಿಸುತ್ತಿವೆ. ಇಂಥ ಕಂಪನಿಗಳೊಂದಿಗೆ ರಾಜಕೀಯ ಪಕ್ಷಗಳು ಒಳ ಒಪ್ಪಂದಗಳನ್ನು ಮಾಡಿಕೊಂಡಿದ್ದೇ ಆದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ದೊಡ್ಡ ಕೊಡಲಿಪೆಟ್ಟು ಬೀಳಲಿದೆ. ಈ ಹಿನ್ನೆಲೆಯಲ್ಲಿ ‘ಚಿಲುಮೆ’ ಪ್ರಕರಣ ಮತ್ತು ಕೇಂಬ್ರಿಡ್ಜ್ ಅನಾಲಿಟಿಕಾ ದತ್ತಾಂಶ ಹಗರಣ ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಹಿಂದೊಮ್ಮೆ ಕಾಸಿಗಾಗಿ ಸುದ್ದಿ ಭಾರತೀಯ ಚುನಾವಣಾ ವ್ಯವಸ್ಥೆಗೆ ತೀವ್ರ ಸವಾಲು ಒಡ್ಡಿತ್ತು. ಈಗ ಈ ಬೃಹತ್ ಕಾರ್ಪೊರೇಟ್‌ಗಳು ಮತ್ತು ಪ್ರಬಲ ರಾಜಕೀಯ ಶಕ್ತಿ ಕೇಂದ್ರಗಳ ಕಣ್ಗಾವಲಿನ ಜೊತೆಯಾಟ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ವಿಪತ್ತನ್ನು ತಂದೊಡ್ಡಿರುವುದು ಸ್ಪಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.