ಮಹಾತ್ಮಾ ಗಾಂಧಿಯನ್ನು ಕೊಂದ‘ಗೋಡ್ಸೆ ದೇಶಭಕ್ತ’ ಎನ್ನುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಜ್ಞಾ ಸಿಂಗ್ ಅವರನ್ನು ಭಯೋತ್ಪಾದಕಿ ಎಂದು ಟೀಕಿಸಿದ್ದಾರೆ.
‘ಭಯೋತ್ಪಾದಕಿ ಪ್ರಜ್ಞಾ, ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿಯೇ ಇದು ಅತ್ಯಂತ ದುಃಖದ ದಿನ’ಎಂದು ರಾಹುಲ್ ಗಾಂಧಿಹೇಳಿದ್ದಾರೆ.
‘ಪ್ರಜ್ಞಾ ಸಿಂಗ್ ಅವರ ಮಾತು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹೃದಯದ ಮಾತು. ಅವರು ಮಹಾತ್ಮಾ ಗಾಂಧಿಯನ್ನು ಎಷ್ಟು ಪೂಜೆ ಮಾಡಿದರೂ ಆಗಾಗ ಈ ದ್ವೇಷದ ಕಿಡಿ ಉದುರುತ್ತಲೇ ಇರುತ್ತೆ’ ಎಂದು ರಾಹುಲ್ ಸಂಸತ್ ಭವನದ ಸಮೀಪ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
ಹೇಳಿಕೆ ಸಮರ್ಥಿಸಿಕೊಂಡ ಪ್ರಜ್ಞಾ
ಗೋಡ್ಸೆ ಹೇಳಿಕೆ ಬಗ್ಗೆ ವಿವಾದ ಭುಗಿಲೆದ್ದಿದೆ. ಆದರೂ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಪ್ರಜ್ಞಾ ಸಿಂಗ್ ಠಾಕೂರ್, ‘ನಾನು ಉದ್ಧಮ್ ಸಿಂಗ್ ಬಗ್ಗೆ ಮಾತನಾಡಿದೆ’ ಎಂದು ಗುರುವಾರಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ#well_done_Pragya ಟ್ರೆಂಡಿಂಗ್
ಟ್ವಿಟರ್‌ನಲ್ಲಿ#well_done_Pragya ಹ್ಯಾಷ್‌ಟ್ಯಾಗ್ ಬಳಸಿ ಸಾವಿರಾರು ಜನರು ಪ್ರಜ್ಞಾ ಠಾಕೂರ್ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ #Godse ಸಹ ಗುರುವಾರ ಇಂಡಿಯಾ ಟ್ರೆಂಡಿಂಗ್‌ನಲ್ಲಿ ಟಾಪ್ ಟ್ರೆಂಡಿಂಗ್ ಆಗಿತ್ತು.
ಚುನಾಯಿತ ಸಂಸದೆಯನ್ನು ಭಯೋತ್ಪಾದಕಿ ಎಂದ ರಾಹುಲ್ ಟ್ವೀಟ್ ಬಗ್ಗೆಯೂ ಹಲವರು ಕಿಡಿ ಕಾರಿದ್ದಾರೆ.
‘ಭಯೋತ್ಪಾದಕರು ಮತ್ತು ಕೊಲೆಗಾರರ ನಡುವೆ ವ್ಯತ್ಯಾಸವಿದೆ ರಾಹುಲ್’ ಎಂದು ಕೆಲವರು ಆಕ್ಷೇಪಿಸಿದ್ದರೆ, ‘ಜನರಿಂದ ಚುನಾಯಿತರಾದ ಸಂಸದೆಯನ್ನು ಭಯೋತ್ಪಾದಕಿ ಎನ್ನುವುದು ತಪ್ಪು’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಸಂಸತ್ತಿನಲ್ಲಿ ಪಕ್ಷದ ನಿಲುವು ಸ್ಪಷ್ಟಪಡಿಸಿದ ರಾಜನಾಥ್ ಸಿಂಗ್
ಲೋಕಸಭೆಯಲ್ಲಿ ಬಿಜೆಪಿಯ ನಿಲುವು ಸ್ಪಷ್ಟಪಡಿಸಿದ ಹಿರಿಯ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ನಾಥುರಾಮ್ ಗೋಡ್ಸೆಯನ್ನು ಯಾರಾದರೂ ದೇಶಭಕ್ತ ಎಂದು ಪರಿಗಣಿಸಿದರೆ ಅದನ್ನು ನಮ್ಮ ಪಕ್ಷ ಖಂಡಿಸುತ್ತದೆ. ಮಹಾತ್ಮಾ ಗಾಂಧಿ ನಮ್ಮ ಆದರ್ಶ. ಅವರು ನಮ್ಮ ದಾರಿದೀಪ. ಇನ್ನು ಮುಂದೆಯೂ ಅವರು ಹಾಗೆಯೇ ಇರುತ್ತಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.