ಬೆಂಗಳೂರು: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೊಟೆರಾ ನವೀಕೃತ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿದ್ದು ಮತ್ತು ಅದರ ಎರಡು ಪೆವಿಲಿಯನ್‌ಗಳಿಗೆ ರಿಲಾಯನ್ಸ್, ಅದಾನಿ ಹೆಸರಿಟ್ಟ ಬೆಳವಣಿಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಶ್ವದ ಅತಿದೊಡ್ಡ ಕ್ರಿಕೆಟ್ ತಾಣವೆಂಬ ಹೆಗ್ಗಳಿಕೆಯ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ರೀಡಾಂಗಣವೆಂದು ಮರುನಾಮಕರಣ ಮಾಡಲಾಯಿತು. ನವೀಕರಣಗೊಂಡ ಈ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದರು. 63 ಎಕರೆ ವಿಸ್ತೀರ್ಣದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಿದೆ. 1.32 ಲಕ್ಷ ಆಸನಗಳ ಸಾಮರ್ಥ್ಯ ಇಲ್ಲಿದೆ. ಸದ್ಯ ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಈ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
‘ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿತ್ತು. ಕ್ರೀಡಾಂಗಣವನ್ನು ಇನ್ನು ಅವರ ಹೆಸರಿನಿಂದಲೇ ಕರೆಯಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಈ ಕುರಿತು ಟ್ವೀಟ್ ಮಾಡಿದ ರಾಹುಲ್ ಗಾಂದಿ. ' ಸತ್ಯ ಹೇಗೆ ತನ್ನಷ್ಟಕ್ಕೆ ತಾನೇ ಬಹಿರಂಗಗೊಂಡಿತು. ಅದ್ಭುತ. ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು. ಎರಡು ಪೆವಿಲಿಯನ್‌ಗಳಿಗೆ ರಿಲಾಯನ್ಸ್, ಅದಾನಿ ಹೆಸರು. ಅಮಿತ್ ಶಾ ಪುತ್ರ ಜೈ ಶಾ ಕ್ರಿಕೆಟ್ ಆಡಳಿತಗಾರ. ನಾವಿಬ್ಬರು ನಮಗಿಬ್ಬರು,' ಎಂದು ಅವರು ಗೇಲಿ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಅಂಬಾನಿ ಮತ್ತು ಅದಾನಿಗೆ ಬೆಂಬಲವಾಗಿದ್ದಾರೆ ಎಂದು ಸದಾ ಆರೋಪಿಸುವ ರಾಹುಲ್ ಗಾಂದಿ, 'ನಾವಿಬ್ಬರು ನಮಗಿಬ್ಬರು,' ಎಂಬ ಗೇಲಿ ಮಾತನ್ನು ಟೀಕೆಗೆ ಬಳಸುತ್ತಾರೆ. ಈ ಬಾರಿಯೂ ಅದನ್ನು ಪುನರುಚ್ಚರಿಸಿದರು.
ಇದನ್ನೂ ಓದಿ:ಅಚ್ಚರಿ,ಮೂಡಿಸಿದ ಮರುನಾಮಕರಣ
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಹೋರಾಟಗಾರ ಪ್ರಶಾಂತ್ ಭೂಷಣ್ ಕೂಡ ಟ್ವೀಟ್ ಮಾಡಿದ್ದು, ' ಸರ್ದಾರ್ ಪಟೇಲ್ ಹೆಸರಿನ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗಿದೆ. ಅದು ಈಗ ನರೇಂದ್ರ ಮೋದಿ ಕ್ರೀಡಾಂಗಣ. ಅದಲ್ಲಿ ಅಂಬಾನಿ ಪೆವಿಲಿಯನ್, ಅದಾನಿ ಪೆವಿಲಿಯನ್ ಇದೆ. ಎಂಥಾ ಸಿಕ್ಸರ್ ಮೋದಿಜಿ,' ಎಂದು ಕುಹಕವಾಡಿದ್ದಾರೆ.
ಇನ್ನೊಂದೆಡೆ, ಸರ್ದಾರ್ ಪಟೇಲ್ ಹೆಸರಿನ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡುವುದು ಪಟೇಲ್ ಅವರಿಗೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು, ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮರುನಾಮಕರಣದ ಈ ಟೀಕೆಗಳಲ್ಲಿ ಆಮ್ ಆದ್ಮಿ ಪಾರ್ಟಿಯೂ ಸೇರಿದೆ. ಈ ಕುರಿತು ಟ್ವೀಟ್ ಮಾಡಿರುವ ಎಎಪಿ ಕರ್ನಾಟಕ ಘಟಕ, 'ಪೇಟಿಯಮ್ ಟೆಸ್ಟ್. ರಿಲಾಯನ್ಸ್ ಮತ್ತು ಅದಾನಿ ಎಂಡ್‌ಗಳನ್ನು ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣ. ಕ್ಯಾಮರಾಮೆನ್‌ಗಳಿರುವ ಪ್ರದೇಶ 'ಶಾ ಜೋನ್' ಆಗಿರಲಿದೆ,' ಎಂದು ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.