ಸ್ಯಾನ್‌ಫ್ರಾನ್ಸಿಸ್ಕೊ: ಫೇಸ್‌ಬುಕ್ ತನ್ನ ಜಾಲತಾಣದಲ್ಲಿ ರಾಜಕಾರಣಿಗಳ ಭಾಷಣ ಪ್ರಸಾರಕ್ಕೆ ಈ ಹಿಂದೆ ನೀಡಿದ್ದ ಕೆಲ ವಿನಾಯಿತಿಗಳನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಈ ಹಿಂದೆ ಪ್ರಕಟಿಸಿದ್ದ ಕೆಲವು ವಿನಾಯಿತಿಗಳು ಕೊನೆಯಾಗಲಿವೆ ಎಂದು ವರದಿಗಳು ತಿಳಿಸಿವೆ.
ರಾಜಕಾರಣಿಗಳ ಭಾಷಣಗಳು ಆಕ್ರಮಣಕಾರಿ, ಬೆದರಿಸುವಿಕೆ ಅಥವಾ ವಿವಾದಾಸ್ಪದವಾಗಿದ್ದರೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವಂತಿದ್ದರೆ ಅದನ್ನು ತಡೆಹಿಡಿಯಲಾಗುತ್ತದೆ ಎಂದು ತಿಳಿದು ಬಂದಿದೆ.
ಫೇಸ್‌ಬುಕ್‌ನ ಈ ನೀತಿಯ ಬದಲಾವಣೆ ಕುರಿತು ಮೊದಲಿಗೆ ‘ಟೆಕ್ ಸೈಟ್ ದಿ ವರ್ಜ್’ ವರದಿ ಮಾಡಿತ್ತು. ಬಳಿಕ ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ವಾಷಿಂಗ್ಟನ್ ಪೋಸ್ಟ್’ ಕೂಡ ಈ ಕುರಿತು ಸುದ್ದಿ ಮಾಡಿವೆ.
2016ರಿಂದ ಫೇಸ್‌ಬುಕ್ ಸಾಮಾನ್ಯ ಸುದ್ದಿ ಅರ್ಹತೆ ವಿನಾಯಿತಿ ನೀತಿಯನ್ನು ಹೊಂದಿದೆ. ಆದರೆ 2019ರಲ್ಲಿ ಇನ್ನೂ ಕೆಲ ಹೆಚ್ಚುವರಿ ವಿನಾಯಿತಿಗಳನ್ನು ನೀಡಲಾಗಿತ್ತು. ಅದಕ್ಕೀಗ ಕೊನೆ ಹಾಡಲು ಫೇಸ್‌ಬುಕ್ ಮುಂದಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ಫೇಸ್‌ಬುಕ್ ನಿರಾಕರಿಸಿದೆ.
ಅಮೆರಿಕದ ಕ್ಯಾಪಿಟಲ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ ಫೇಸ್‌ಬುಕ್, ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಖಾತೆಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿತ್ತು. ಇನ್ನು ಮುಂದೆ ವಿವಾದಾತ್ಮಕ ಅಥವಾ ಸಮಾಜದ ಸ್ಥಾನಮಾನಕ್ಕೆ ತಕ್ಕುದಲ್ಲದ ಹೇಳಿಕೆ ನೀಡುವ ಪ್ರತಿಯೊಬ್ಬ ರಾಜಕಾರಣಿಗೂ ಇದೇ ರೀತಿಯ ಪರಿಸ್ಥಿತಿ ಒದಗುವ ಸಾಧ್ಯತೆ ಇದೆ ಅಥವಾ ರಾಜಕಾರಣಿಗಳ ಹೇಳಿಕೆಗಳನ್ನು ಮೂಲದಲ್ಲೇ ಪ್ರಕಟಿಸುವುದಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.