ಬೆಂಗಳೂರು: ಇ–ಕಾಮರ್ಸ್ ವಲಯದ ದೈತ್ಯ ಕಂಪನಿ ಅಮೆಜಾನ್, 'ಎಕ್ಸ್‌ಬಾಕ್ಸ್ ಕಂಟ್ರೋಲರ್'ಗಾಗಿ ಆರ್ಡರ್ ಮಾಡಿದ ಬೆಂಗಳೂರಿನ ಗ್ರಾಹಕರ ಮನೆಗೆ ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದೆ!
ಅಮೆಜಾನ್‌ನಿಂದ ಬಂದ ಬಾಕ್ಸ್ ತೆರೆದಾಗ 'ಎಕ್ಸ್‌ಬಾಕ್ಸ್ ಕಂಟ್ರೋಲರ್' ಜೊತೆಗೆ ಹಾವು ಕಾಣಿಸಿದೆ. ಬಾಕ್ಸ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಹಾವು ಸಿಲುಕಿಕೊಂಡಿದ್ದರಿಂದ, ಯಾವುದೇ ಅಪಾಯ ಸಂಭವಿಸಿಲ್ಲ. ಬಾಕ್ಸ್ ಅನ್ನು ಬಕೆಟ್‌ನಲ್ಲಿ ಇಟ್ಟು ವಿಡಿಯೊ ಮಾಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಡಿಯೊವನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ತನ್ವಿ ಎಂಬವರು, 'ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆ' ಎಂದು ಬರೆದುಕೊಂಡಿದ್ದಾರೆ. ತನ್ವಿ ಅವರ ಖಾತೆಯಲ್ಲಿ ಬೆಂಗಳೂರಿನವರು ಎಂಬ ಮಾಹಿತಿ ಇದೆ.
ಈ ಪೋಸ್ಟ್‌ಗೆ ಎಕ್ಸ್‌ನಲ್ಲೇ ಪ್ರತಿಕ್ರಿಯಿಸಿ, ಕ್ಷಮೆಯಾಚಿಸಿರುವ ಅಮೆಜಾನ್, ಕೂಡಲೇ ಸಂಪರ್ಕಿಸುವುದಾಗಿ ತಿಳಿಸಿದೆ.
ತನ್ವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಲವರು, ದೂರು ದಾಖಲಿಸಿ ಎಂದು ಸಲಹೆ ನೀಡಿದ್ದಾರೆ.
ವಿಡಿಯೊ ಹಂಚಿಕೊಂಡಿರುವ ಪ್ರಕಾಶ್ ಎಂಬವರು, 'ಸರ್ಜಾಪುರ ರಸ್ತೆಯಲ್ಲಿರುವ ಕುಟುಂಬವೊಂದು, ಅಮೆಜಾನ್‌ನಲ್ಲಿ ತಾವು ಆರ್ಡರ್ ಮಾಡಿದ್ದ ಎಕ್ಸ್‌ಬಾಕ್ಸ್ ಕಂಟ್ರೋಲರ್ ಜೊತೆಗೆ ಜೀವಂತ ಹಾವನ್ನೂ ಸ್ವೀಕರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್, ಆ ವಿಷಕಾರಿ ಹಾವು ಪ್ಯಾಕಿಂಗ್ ಟೇಪ್‌ನಲ್ಲೇ ಸಿಲುಕಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.