ADVERTISEMENT

Explainer: ಹೊಸ ನಿಯಮ ಪಾಲಿಸದಿದ್ದರೆ ಎಫ್‌ಬಿ, ಟ್ವಿಟರ್, ವಾಟ್ಸ್‌ಆ್ಯಪ್ ನಿಷೇಧ?

​ಪ್ರಜಾವಾಣಿ ವಾರ್ತೆ
Published 26 ಮೇ 2021, 9:21 IST
Last Updated 26 ಮೇ 2021, 9:21 IST
ಸಾಮಾಜಿಕ ಮಾಧ್ಯಮಗಳನ್ನು ಸೂಚಿಸುವ ಲೋಗೊಗಳು–ಸಾಂದರ್ಭಿಕ ಚಿತ್ರ
ಸಾಮಾಜಿಕ ಮಾಧ್ಯಮಗಳನ್ನು ಸೂಚಿಸುವ ಲೋಗೊಗಳು–ಸಾಂದರ್ಭಿಕ ಚಿತ್ರ   

ಕೇಂದ್ರ ಸರ್ಕಾರ ಫೆಬ್ರುವರಿ 25ರಂದು ಪ್ರಕಟಿಸಿರುವ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳನ್ನು ಅನುಸರಿಸದಿದ್ದರೆ, ಸಾಮಾಜಿಕ ಮತ್ತು ಒಟಿಟಿ ಸೇವೆಗಳ ಕಾರ್ಯಾಚರಣೆ ದೇಶದಲ್ಲಿ ಸ್ಥಗಿತಗೊಳ್ಳಬಹುದು!

ಸರ್ಕಾರದ ಸೂಚನೆಯ ಪ್ರಕಾರ, ಬುಧವಾರವಾರದಿಂದ ಹೊಸ ನಿಯಮಗಳು ಅನುಷ್ಠಾನಗೊಂಡಿವೆ. ನಿಯಮ ಪಾಲಿಸಲು ಕೊನೆಯ ದಿನ ಸಮೀಪಿಸುತ್ತಿದ್ದಂತೆ ಬಳಕೆದಾರರು ಸಾಮಾಜಿಕ ಮಾಧ್ಯಮಗಳು ಸ್ಥಗಿತಗೊಳ್ಳುವ ಬಗ್ಗೆ ತಳಮಳ ವ್ಯಕ್ತಪಡಿಸಿದ್ದರು. ಆದರೆ, ಎಲ್ಲ ಸಾಮಾಜಿಕ ಮಾಧ್ಯಮಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ.

ಈ ನಡುವೆ, ಫೇಸ್‌ಬುಕ್‌ನ ಭಾಗವಾಗಿರುವ 'ವಾಟ್ಸ್‌ಆ್ಯಪ್‌' ಹೊಸ ನಿಯಮಗಳ ಅನುಷ್ಠಾನವನ್ನು ನಿರ್ಬಂಧಿಸುವಂತೆ ಕೋರಿ, ಭಾರತ ಸರ್ಕಾರದ ವಿರುದ್ಧ ದೆಹಲಿ ಹೈ ಕೋರ್ಟ್‌ ಮೊರೆ ಹೋಗಿದೆ. ನಿಯಮಗಳನ್ನು ಪಾಲಿಸುವುದಾದರೆ, ಸಂದೇಶದ ಮೂಲವನ್ನು ಪತ್ತೆ ಮಾಡಬೇಕಾಗುತ್ತದೆ ಮತ್ತು ಗೂಢ ಲಿಪೀಕರಣ ವ್ಯವಸ್ಥೆಯನ್ನು ಕಡಿತಗೊಳಿಸಿ ಸಂದೇಶ ಸೃಜಿಸಿದ ವ್ಯಕ್ತಿಯ ಪತ್ತೆ ಮಾಡಬೇಕಾಗುತ್ತದೆ. ಇದರಿಂದ ಖಾಸಗಿತನದ ಸುರಕ್ಷತೆಗೆ ಧಕ್ಕೆಯಾಗಲಿದೆ ಎಂದು ವಾಟ್ಸ್‌ಆ್ಯಪ್‌ ಕಳವಳ ವ್ಯಕ್ತಪಡಿಸಿದೆ.

ADVERTISEMENT

ಸರ್ಕಾರದ ಮಾಹಿತಿಯ ಪ್ರಕಾರ, ಭಾರತದಲ್ಲಿ 53 ಕೋಟಿ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದಾರೆ. ಯುಟ್ಯೂಬ್‌ ಬಳಕೆದಾರರ ಸಂಖ್ಯೆ 44.8 ಕೋಟಿ, ಫೇಸ್‌ಬುಕ್‌ನ್ನು 41 ಕೋಟಿ ಜನರು ಬಳಸುತ್ತಿದ್ದಾರೆ, ಇನ್‌ಸ್ಟಾಗ್ರಾಮ್‌ಗೆ 21 ಕೋಟಿ ಬಳಕೆದಾರರು ಹಾಗೂ 1.75 ಕೋಟಿ ಟ್ವಿಟರ್‌ ಬಳಕೆದಾರರಿದ್ದಾರೆ.

ಕಂಪನಿಗಳು ಹೊಸ ನಿಯಮಗಳನ್ನು ಅನುಸರಿಸದಿದ್ದರೆ, ಸೇವೆ ಸ್ಥಗಿತಗೊಳ್ಳಲಿದೆಯೇ? ಇದನ್ನು ಕಂಪನಿಗಳು ಹೇಗೆ ಎದುರಿಸುತ್ತವೆ?– ಈ ಬಗ್ಗೆ ತಿಳಿದಿರುವ ಒಂದಿಷ್ಟು ಮಾಹಿತಿ ಇಲ್ಲಿದೆ:

* ನಿಯಮ ಪಾಲನೆ ಮತ್ತು ನಿಷೇಧಿಸುವ ಬಗ್ಗೆ ಚರ್ಚೆ ಏಕೆ?

ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮಗಳು ಮತ್ತು ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಫೆಬ್ರುವರಿ 25ರಂದು ಪ್ರಕಟಿಸಿತು. 'ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್‌ ನೀತಿ ಸಂಹಿತೆ) ನಿಯಮಗಳು 2021'–ಇದರೊಂದಿಗೆ ಪ್ರಕಟಿಸಲಾಗಿರುವ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಮೂರು ತಿಂಗಳ ಅವಕಾಶ ನೀಡಲಾಗಿತ್ತು. ಅದರಂತೆ ಮೇ 25ಕ್ಕೆ (ಮಂಗಳವಾರ) ಗಡುವು ಕೊನೆಯಾಗಿದೆ.

* ಹೊಸ ನಿಯಮಗಳಲ್ಲಿ ಏನಿದೆ?

ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆಗಳು ಬಳಕೆದಾರರ ದೂರುಗಳನ್ನು ಆಲಿಸಿ, ಸಕಾಲದಲ್ಲಿ ಪರಿಹಾರ ಒದಗಿಸಲು ದೂರು ನಿರ್ವಹಣಾ ವ್ಯವಸ್ಥೆ, ದೂರ ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು. ಕಂಟೆಂಟ್‌ಗಳನ್ನು (ಚಿತ್ರ, ಫೋಟೊ, ವಿಡಿಯೊ ಸೇರಿದಂತೆ ಯಾವುದೇ ಕಾರ್ಯಕ್ರಮ) ತೆರವು ಮಾಡಬೇಕು ಎಂದು ಸರ್ಕಾರವಾಗಲೀ, ನ್ಯಾಯಾಲಯವಾಗಲೀ ಆದೇಶ ನೀಡಿದ 36 ಗಂಟೆಗಳ ಒಳಗೆ ಅದನ್ನು ಅನುಷ್ಠಾನಕ್ಕೆ ತರಬೇಕು.

ಕಂಟೆಂಟ್‌ಗಳು, ಸುಳ್ಳುಸುದ್ದಿಗಳ ಮೂಲ ಯಾವುದು ಎಂಬುದನ್ನು ಪತ್ತೆಮಾಡಬೇಕು. ತನಿಖೆಯ ಕಾರಣಕ್ಕೆ ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಬೇಕಾಗುತ್ತದೆ.

* ಕಂಪನಿಗಳು ನಿಯಮಗಳನ್ನು ಪಾಲಿಸದಿದ್ದರೆ?

ಮಾರ್ಗಸೂಚಿಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಗಳು ಹೊಸ ನಿಯಮಗಳನ್ನು ಅನುಸರಿದಿದ್ದರೆ, 'ಮಧ್ಯಸ್ಥ' ಸಂಸ್ಥೆಗಳಾಗಿ ಪಡೆದಿರುವ ರಕ್ಷಣೆಯನ್ನು ಕಳೆದುಕೊಳ್ಳಲಿವೆ ಹಾಗೂ ತೀವ್ರವಾದ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದು.

* ಕಂಪನಿಗಳು ಹೊಸ ನಿಯಮಗಳನ್ನು ಅನುಸರಿಸುತ್ತಿವೆಯೇ?

ಟ್ವಿಟರ್ ರೀತಿಯ ಮೈಕ್ರೊ ಬ್ಲಾಗಿಂಗ್‌ ಸೈಟ್‌, ಭಾರತದ 'ಕೂ' ಸಾಮಾಜಿಕ ಮಾಧ್ಯಮ ಮಾತ್ರವೇ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸುತ್ತಿರುವುದಾಗಿ ಘೋಷಿಸಿದೆ. ಫೇಸ್‌ಬುಕ್‌ ಮತ್ತು ಗೂಗಲ್‌ ಹೊಸ ನಿಯಮಗಳನ್ನು ಒಪ್ಪಿಕೊಳ್ಳುವ ಸೂಚನೆ ನೀಡಿವೆ. ಫೇಸ್‌ಬುಕ್‌ ಒಡೆತನದ ವಾಟ್ಸ್ಆ್ಯಪ್‌, ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕಟಿಸಿರುವ ಹೊಸ ನಿಯಮಗಳಲ್ಲಿ ಭಾರತದ ಸಂವಿಧಾನ ನೀಡಿರುವ ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ದೆಹಲಿ ಹೈ ಕೋರ್ಟ್‌ನಲ್ಲಿ ದೂರು ದಾಖಲಿಸಿದೆ.

ಬಿಜೆಪಿಯ ವಕ್ತಾರರ ಖಾತೆಯಿಂದ ತಿದ್ದುಪಡಿ ಮಾಡಿದ ಕಂಟೆಂಟ್‌ಗಳನ್ನು ಪ್ರಕಟಿಸಲಾಗಿದೆ ಎಂದು ಟ್ವಿಟರ್‌ ಸೂಚಿಸಿತ್ತು. 'ನಕಲಿ ಟೂಲ್‌ಕಿಟ್‌' ಕುರಿತು ರಾಜಕೀಯ ಪಕ್ಷಗಳ ನಡುವೆ ಚರ್ಚೆ ಕಾವೇರಿತ್ತು ಹಾಗೂ ಅದರ ಬೆನ್ನಲ್ಲೇ ಪೊಲೀಸರು ಟ್ವಿಟರ್‌ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಮುಂದಾಗಿದ್ದರು. ಟ್ವಿಟರ್‌ ಹೊಸ ನಿಯಮಗಳ ಕುರಿತು ಈವರೆಗೂ ಮೌನ ವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.