ADVERTISEMENT

ವಲ್ಲಭಬಾಯ್ 'ಏಕತಾ ಪ್ರತಿಮೆ' ಬಳಿ ಫಲಕವೇ ಇಲ್ಲ? ವೈರಲ್ ಆಗಿದ್ದು ಫೇಕ್ ಚಿತ್ರ?

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 18:25 IST
Last Updated 31 ಅಕ್ಟೋಬರ್ 2018, 18:25 IST
   

ಗಾಂಧಿನಗರ: ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯ ಸಮೀಪ ಸ್ಥಾಪಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯ ಬಳಿ ಇರುವ ಫಲಕದಲ್ಲಿ ತಮಿಳು ಲಿಪಿಯಲ್ಲಿ ತಪ್ಪಾಗಿStatue of Unity ಎಂದು ಬರೆದಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫಲಕದ ಚಿತ್ರ ಫೇಕ್ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಏನಿದು ಚಿತ್ರ?
ಪಟೇಲ್ ಪ್ರತಿಮೆ ಬಳಿ ಇರುವ ಫಲಕದಲ್ಲಿ 10 ಭಾಷೆಗಳಲ್ಲಿ Statue of Unity ಎಂದು ಬರೆಯಲಾಗಿದೆ.ದಕ್ಷಿಣ ಭಾರತದ ಭಾಷೆಗಳ ಪೈಕಿ ತಮಿಳು ಲಿಪಿಯಲ್ಲಿ Statue of Unity ಎಂದು ಬರೆಯಲಾಗಿದ್ದರೂ ಅಲ್ಲಿ ಅಕ್ಷರ ತಪ್ಪುಗಳಾಗಿವೆ. ಅದೇ ವೇಳೆ ಬರೀ ತಮಿಳು ಭಾಷೆಯಲ್ಲಿ ಮಾತ್ರ ಯಾಕೆ ಕನ್ನಡ ಭಾಷೆಯಲ್ಲಿ ಯಾಕಿಲ್ಲ ಎಂದು ಕನ್ನಡಿಗರು ಪ್ರಶ್ನಿಸಿದರೆ, ತೆಲುಗು ಕೈ ಬಿಟ್ಟಿರುವ ಬಗ್ಗೆ ತೆಲುಗಿನವರೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು.

ಉದ್ಘಾಟನೆ ವೇಳೆ ಫಲಕ ಅಲ್ಲಿರಲಿಲ್ಲ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫಲಕದ ಚಿತ್ರ ಸುಳ್ಳು ಸುದ್ದಿಯಾಗಿದ್ದು, ಬುಧವಾರ ಪ್ರತಿಮೆ ಉದ್ಛಾಟನೆ ವೇಳೆ ಆ ಫಲಕ ಇರಲಿಲ್ಲ. ತಪ್ಪಾಗಿ ತಮಿಳು ಅನುವಾದ ಮಾಡಿರುವ ಫಲಕದ ಚಿತ್ರ ಯಾರೋ ದುರುದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ.ನಿಜವಾದ ಫಲಕವಾಗಿದ್ದರೆ ಅದರಲ್ಲಿ ಸರ್ಕಾರದ ಲೋಗೊ ಇರುತ್ತಿತ್ತು.ಅದೇ ವೇಳೆ ಚಿತ್ರದಲ್ಲಿ ತೋರಿಸಿದಂತೆ ಫಲಕದಲ್ಲಿ ವಿದೇಶಿ ಭಾಷೆಗಳನ್ನು ಬಳಸುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಚಿಂತನೆ ನಡೆಸಿಲ್ಲ.ನಾವು ವಿದೇಶದಿಂದ, ವಿಶೇಷವಾಗಿ ರಷ್ಯಾ ಮತ್ತು ಯುರೋಪ್‍ನಿಂದ ಪ್ರವಾಸಿಗಳು ಬರುತ್ತಾರೆ ಎಂದು ನಿರೀಕ್ಷಿಸುವುದಿಲ್ಲ.ಹಾಗೊಂದು ಫಲಕ ಹಾಕುವುದಾದರೆ ಅದರಲ್ಲಿ ಭಾರತೀಯ ಭಾಷೆಗಳನ್ನು ಬಳಸಲಾಗುವುದು, ದೇಶದ ಏಕತೆಯನ್ನು ಬಿಂಬಿಸಲು ಇದು ಸಹಕಾರಿ ಎಂದು ಸರ್ದಾರ್ ಸರೋವರ್ ನಿಗಮದ ಹಿರಿಯ ಅಧಿಕಾರಿಯೊಬ್ಬರುಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ADVERTISEMENT

ನಿಜವಾದ ಫಲಕದಫೋಟೊ ಇಲ್ಲಿದೆ

ಪಟೇಲ್ ಪ್ರತಿಮೆಯ ಬಳಿ ಇರುವ ಫಲಕ ಇದು. ಇದರಲ್ಲಿ ಭಾರತದ 22 ಅಧಿಕೃತ ಭಾಷೆಗಳಲ್ಲಿ ಏಕ ಭಾರತ ಶ್ರೇಷ್ಠ ಭಾರತ ಎಂದು ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.