ಬೆಂಗಳೂರು: ಜಮ್ಮ-ಕಾಶ್ಮೀರದ ಪುಲ್ವಾಮ ಸ್ಫೋಟದ ವಿಡಿಯೊ ಎಂದು ವೈರಲ್ ಆಗುತ್ತಿರುವ ವಿಡಿಯೊ ವಾಸ್ತವದಲ್ಲಿ ಸಿರಿಯಾದಲ್ಲಿ ನಡೆದ ಸ್ಫೋಟದ್ದು ಎಂದು 'ಬೂಮ್ ಲೈವ್' ಪತ್ತೆ ಮಾಡಿದೆ.
ಈ ವಿಡಿಯೋ ಸ್ಫೋಟ ನಡೆಯುವುದಕ್ಕೆ ಎರಡು ದಿನ ಮೊದಲೇ ವಿವಿಧ ವೆಬ್‌ಸೈಟ್‌ಗಳಲ್ಲಿ ಇತ್ತು. ಫೇಸ್‌ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ ವೈರಲ್ ಆಗಿರುವ ಒಂಬತ್ತು ಸೆಕೆಂಡುಗಳ ಅವಧಿಯ ಈ ವಿಡಿಯೋದ ಕೆಳಗೆ ಹಿಂದಿ ಭಾಷೆಯಲ್ಲಿ 'ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಸಿಸಿ ಟಿವಿ ವಿಡಿಯೊ' ಎಂಬ ಬರೆಯಲಾಗಿದೆ. ಬೂಮ್ ಲೈವ್‌ನ ಪತ್ರಕರ್ತರು ವಿಡಿಯೊದ ಬಹುಮುಖ್ಯ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ವಿಡಿಯೊದ ಮೂಲ ಬಯಲಾಗಿದೆ.
ಸ್ಫೋಟ ನಡೆಯುವುದಕ್ಕೂ ಎರಡು ದಿನಗಳ ಹಿಂದೆಯೇ "Syria.liveumap.com"ನಲ್ಲಿ ಈ ವಿಡಿಯೊ ಪ್ರಕಟವಾಗಿದೆ. ಸಿರಿಯಾದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಯಿಟರ್ಸ್ ವಾರ್ತಾ ಏಜನ್ಸಿಯ ವರದಿಯೂ ಇದೆ.
ಸಿರಿಯಾ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿರುವ ಅಲ್ ರಾಯ್ ಎಂಬ ಪಟ್ಟಣದಲ್ಲಿ ಫೆ.12ರಂದು ನಡೆದ ಸ್ಫೋಟ ಇದು. ಈ ಸ್ಫೋಟದಲ್ಲಿ ನಾಲ್ಕು ಮಂದಿ ಸಾರ್ವಜನಿಕರು ಮತ್ತು ಮೂವರು ಭದ್ರತಾ ಪಡೆಗಳ ಸದಸ್ಯರು ಗಾಯಗೊಂಡಿದ್ದಾರೆ. ಉತ್ತರ ಸಿರಿಯಾದ ಪಟ್ಟಣವಾದ ಅಲ್-ರಾಯ್ 2016ರವರೆಗೂ ಐಸಿಸ್ ಉಗ್ರರ ಹಿಡಿತದಲ್ಲಿತ್ತು. ಈಗ ಅದರ ಮೇಲೆ ಟರ್ಕಿ ಬೆಂಬಲಿತ ಭಿನ್ನಮತೀಯರ ಗುಂಪು ಹಿಡಿತ ಸಾಧಿಸಿದೆ. ಈ ವಿಡಿಯೊ ಪುಲ್ವಾನ ಸ್ಫೋಟದ್ದಲ್ಲ ಎಂಬುದನ್ನು ಸಾಬೀತು ಮಾಡುವಂಥ ಹಲವು ಟ್ವೀಟ್‌ಗಳೂ 'ಬೂಮ್ ಲೈವ್''ಗೆ ಲಭ್ಯವಾಗಿವೆ. ಈ ವಿಡಿಯೋ ಟರ್ಕಿಯ ಟಿ.ವಿ. ಚಾನೆಲ್ ಎನ್‌ಟಿವಿ ಕೂಡಾ ಪ್ರಸಾರ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.