ADVERTISEMENT

ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಇನ್ನೂ ವಿವಾಹವಾಗಿಲ್ಲ; ಆದರೂ 100 ಮಕ್ಕಳ ತಂದೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2024, 15:39 IST
Last Updated 31 ಜುಲೈ 2024, 15:39 IST
<div class="paragraphs"><p>ಪಾವೆಲ್ ಡುರೊವ್</p></div>

ಪಾವೆಲ್ ಡುರೊವ್

   

ಇನ್‌ಸ್ಟಾಗ್ರಾಂ ಚಿತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮ ಟೆಲಿಗ್ರಾಂನ ಸಹ ಸಂಸ್ಥಾಪಕ ಪಾವೆಲ್ ಡುರೊವ್ ಅವರು ತಾವು ನೂರು ಮಕ್ಕಳ ಜೈವಿಕ ತಂದೆ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. 

ADVERTISEMENT

ತಮ್ಮದೇ ಟೆಲಿಗ್ರಾಂನ ಡು ರೋವ್ಸ್‌ ಚಾನಲ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ತಮ್ಮ ವೀರ್ಯದಾನದ ಹಿಂದಿನ ಕಥೆಯನ್ನು ಎಳೆಎಳೆಯಾಗಿ ಹೇಳಿದ್ದಾರೆ.

‘ನನಗೆ 100 ಮಕ್ಕಳು ಇದ್ದಾರೆ ಎಂದು ಹೇಳಿದ್ದೆ. ಆದರೆ ವಿವಾಹವಾಗದ ಹಾಗೂ ಒಬ್ಬೊಂಟಿಯಾಗಿರಲು ಬಯಸಿದ ವ್ಯಕ್ತಿಯೊಬ್ಬ ಹೇಗೆ 100 ಮಕ್ಕಳ ತಂದೆಯಾಗಲು ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಇದಕ್ಕೆ 15 ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ’ ಎಂದು ತಮ್ಮ ಸಂಕತನ ವಿವರಿಸಿದ್ದಾರೆ.

‘ನನ್ನೊಬ್ಬ ಸ್ನೇಹಿತ ನನ್ನ ಬಳಿ ಬಂದು ಒಂದು ವಿಚಿತ್ರವಾದ ಬೇಡಿಕೆ ಇಟ್ಟ. ಫಲವಂತಿಕೆ ಸಮಸ್ಯೆಯಿಂದ ಅವರಿಗೆ ಮಕ್ಕಳಾಗುತ್ತಿರಲಿಲ್ಲ. ಹೀಗಾಗಿ ಕ್ಲಿನಿಕ್ ಒಂದಕ್ಕೆ ಬಂದು ವೀರ್ಯದಾನ ಮಾಡುವಂತೆ, ಆ ಮೂಲಕ ತಾವೊಂದು ಮಗುವನ್ನು ಹೊಂದಲು ನೆರವಾಗುವಂತೆ ಕೋರಿಕೊಂಡ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಮುನ್ನ ಕುಹಕವಾಗಿ ನಕ್ಕಿದ್ದೆ’ ಎಂದು ಪಾವೆಲ್ ಹೇಳಿದ್ದಾರೆ.

‘ಆ ಕ್ಲಿನಿಕ್‌ನ ಮುಖ್ಯಸ್ಥನೊಂದಿಗೆ ಚರ್ಚೆ ನಡೆಸಿದಾಗ, ಗುಣಮಟ್ಟದ ವೀರ್ಯ ಸಿಗುವುದೇ ಕಷ್ಟ. ಹೀಗಾಗಿ ವೀರ್ಯದಾನ ಮಾಡುವ ಮೂಲಕ ಸಂತಾನ ವಂಚಿತರಾದ ಬಹಳಷ್ಟು ದಂಪತಿಗೆ ನೆರವಾಗಿ ಸಾಮಾಜಿಕ ಕಾಳಜಿ ಮೆರೆಯಬೇಕು ಎಂಬ ಸಲಹೆಯನ್ನೂ ನೀಡಿದರು. ಇದು ವಿಚಿತ್ರ ಎನಿಸಿದರೂ, ದಾನಪತ್ರಕ್ಕೆ ಸಹಿ ಹಾಕಿದೆ’ ಎಂದು ತಮ್ಮ ವೀರ್ಯದಾನದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

‘ನನ್ನ ಆ ಕಾರ್ಯವನ್ನು ಈಗ ಹಿಂದಿರುಗಿ ನೋಡಿದರೆ, ಸುಮಾರು ನೂರು ದಂಪತಿಗೆ ನನ್ನಿಂದ ಸಹಾಯವಾಗಿದೆ. ನನ್ನ ವೀರ್ಯದಿಂದ ಜನಿಸಿದ ಮಕ್ಕಳು 12 ದೇಶಗಳಲ್ಲಿದ್ದಾರೆ. ಆದರೆ ವೀರ್ಯದಾನ ನಿಲ್ಲಿಸಿ ಕೆಲ ವರ್ಷಗಳಾದವು. ಆದರೆ ಈಗಲೂ ಐವಿಎಫ್ ಕ್ಲಿನಿಕ್‌ನಲ್ಲಿ ನನ್ನ ವೀರ್ಯವನ್ನು ಶೇಖರಿಸಿಡಲಾಗಿದ್ದು, ಮಕ್ಕಳನ್ನು ಬಯಸುವ ದಂಪತಿಗೆ ಲಭ್ಯ ಇವೆ’ ಎಂದು ಪಾವೆಲ್ ಹೇಳಿದ್ದಾರೆ.

‘ಇದೀಗ ಇದರ ಮುಂದುವರಿದ ಭಾಗವಾಗಿ, ನನ್ನ ವಂಶವಾಹಿಯನ್ನು ಓಪನ್ ಸೋರ್ಸ್ ಮಾಡಲು ಬಯಸಿದ್ದೇನೆ. ಆ ಮೂಲಕ ಭವಿಷ್ಯದಲ್ಲಿ ನನ್ನ ವೀರ್ಯದಿಂದ ಜನಿಸಿದವರು ಪರಸ್ಪರ ಸಂದಿಸಲು ಸುಲಭವಾಗಿ ಸಾಧ್ಯವಾಗಲಿದೆ. ಇದರಲ್ಲಿ ಒಂದಷ್ಟು ಅಪಾಯಗಳಿವೆ. ಆದರೆ ದಾನಿಯಾಗಿರುವುದಕ್ಕೆ ನನಗೆ ಯಾವುದೇ ವಿಷಾದವಿಲ್ಲ. ಜಾಗತಿಕ ಮಟ್ಟದಲ್ಲಿ ಆರೋಗ್ಯವಂತ ವೀರ್ಯದ ಅಭಾವವಿದೆ. ಆ ಕೊರತೆಯನ್ನು ನೀಗಿಸಿದ ಹೆಮ್ಮೆ ನನಗಿದೆ’ ಎಂದು ಟೆಲಿಗ್ರಾಂ ಸಹ ಸಂಸ್ಥಾಪಕ ಪಾವೆಲ್ ಹೇಳಿದ್ದಾರೆ.

‘ಹೀಗೆ ವೀರ್ಯದಾನವನ್ನು ಆರೋಗ್ಯವಂತ ಪುರುಷರು ಹೆಚ್ಚು ಹೆಚ್ಚು ಮಾಡಬೇಕು. ಆ ಮೂಲಕ ಸಂತಾನ ಭಾಗ್ಯ ಪಡೆಯಲು ಸಾಕಷ್ಟ ಪ್ರಯಾಸ ಪಡುತ್ತಿರುವ ಕುಟುಂಬಗಳಿಗೆ ನೆರವಾಗಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.