ಸ್ಯಾನ್ ಫ್ರಾನ್ಸಿಸ್ಕೊ: ತಂತ್ರಜ್ಞಾನ ದೈತ್ಯ ಗೂಗಲ್ ಹಿಂದಿಕ್ಕಿರುವ ಕಿರು ವಿಡಿಯೊ ಹಂಚಿಕೆ ತಾಣ ಟಿಕ್‌ಟಾಕ್, ವರ್ಷದ ಅತ್ಯಂತ ಜನಪ್ರಿಯ ವೆಬ್‌ಸೈಟ್ ಆಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
ಐಟಿ ಭದ್ರತಾ ಕಂಪನಿ 'ಕ್ಲೌಡ್‌ಫ್ಲೇರ್' ಪ್ರಕಾರ, ವೈರಲ್ ವಿಡಿಯೊ ಅಪ್ಲಿಕೇಷನ್ ಟಿಕ್‌ಟಾಕ್, ಅಮೆರಿಕ ಮೂಲದ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್‌ಗಿಂತಲೂ ಹೆಚ್ಚು ಹಿಟ್ಸ್‌ಗಳನ್ನು ಗಿಟ್ಟಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ, ಮಾರ್ಚ್ ಹಾಗೂ ಜೂನ್‌ನಲ್ಲಿ ಗೂಗಲ್ ಅನ್ನು ಅಗ್ರಸ್ಥಾನದಿಂದ ಕೆಳಗಿಳಿಸಿರುವ ಟಿಕ್‌ಟಾಕ್, ಆಗಸ್ಟ್ ತಿಂಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ಹೇಳಿದೆ.
2020ರಲ್ಲಿ ಗೂಗಲ್ ಅಗ್ರಸ್ಥಾನದಲ್ಲಿತ್ತು. ಟಿಕ್‌ಟಾಕ್, ಅಮೆಜಾನ್, ಆ್ಯಪಲ್, ಫೇಸ್‌ಬುಕ್, ಮೈಕ್ರೊಸಾಫ್ಟ್, ನೆಟ್‌ಫ್ಲಿಕ್ಸ್ ಸೇರಿದಂತೆ ಇತರೆ ವೆಬ್‌ಸೈಟ್‌ಗಳು ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದವು.
ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವುದು ಟಿಕ್‌ಟಾಕ್ ಹೆಚ್ಚಿನ ಜನಪ್ರಿಯತೆ ಗಳಿಸಲು ನೆರವಾಗಿದೆ. ಲಾಕ್‌ಡೌನ್ ಕಾಲಘಟ್ಟದಲ್ಲಿ ಮನೆಯಲ್ಲೇ ಸಿಲುಕಿಕೊಂಡ ಜನರು ಮನರಂಜನೆಗಾಗಿ ಹೊಸತನವನ್ನು ಎದುರು ನೋಡುತ್ತಿದ್ದರು ಎಂದು ಹೇಳಿದೆ.
ಚೀನಾ ಮೂಲದ ಬೈಟ್‌ಡ್ಯಾನ್ಸ್ ಅಧೀನದಲ್ಲಿರುವ ಸಾಮಾಜಿಕ ಆ್ಯಪ್ ಟಿಕ್‌ಟಾಕ್, ಜಗತ್ತಿನಾದ್ಯಂತ 100 ಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ.
2020 ಜೂನ್‌ನಲ್ಲಿ ಚೀನಾದೊಂದಿಗಿನ ಗಡಿ ವಿವಾದದ ಉದ್ವಿಗ್ನ ಪರಿಸ್ಥಿತಿ ಹಾಗೂ ಆಂತರಿಕ ಭದ್ರತೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಟಿಕ್‌ಟಾಕ್ ಅನ್ನು ನಿಷೇಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.