ಮಡಿಕೇರಿ: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು, ತಕ್ಷಣವೇ ಕೊಡಗು ಜಿಲ್ಲೆಗೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹುಲಿ ಸೆರೆ ಕಾರ್ಯಾಚರಣೆ ಚುರುಕು ಪಡೆಯುವಂತೆ ಮಾಡಬೇಕು ಎಂದು ಜಿಲ್ಲೆಯ ವಿವಿಧ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿವೆ.
‘ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿ ಅಪಾಯಕಾರಿ ಆಗಿರುವ ಹುಲಿ ಸೆರೆಯಾದ ಮೇಲೆ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತೇನೆ. ನನ್ನ ಭೇಟಿಯಿಂದ ಕಾರ್ಯಾಚರಣೆಗೆ ಅಡ್ಡಿ ಆಗಲಿದೆ. ಕಾರ್ಯಾಚರಣೆ ಮುಗಿದ ಮೇಲೆ ಕೊಡಗಿಗೆ ಬರುತ್ತೇನೆ’ ಎಂದು ಅರವಿಂದ ಲಿಂಬಾವಳಿ ಬೆಂಗಳೂರಿನಲ್ಲಿ ಹೇಳಿದ್ದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಮುಖಂಡರು, ‘ತಕ್ಷಣವೇ ಕೊಡಗಿಗೆ ಸಚಿವರು ಬಂದು, ಹುಲಿ ದಾಳಿಯಿಂದ ಆತಂಕಕ್ಕೆ ಒಳಗಾಗಿರುವ ಕಾರ್ಮಿಕರು ಹಾಗೂ ಬೆಳೆಗಾರರಿಗೆ ಧೈರ್ಯ ತುಂಬಬೇಕು’ ಎಂದು ಮನವಿ ಮಾಡಿದ್ದಾರೆ.
‘ಅಧಿಕಾರಿಗಳಿಗೆ ಸ್ಪಷ್ಟ ಆದೇಶವಿಲ್ಲದೇ ನೆಪ ಮಾತ್ರಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಶಾರ್ಪ್‌ಶೂಟರ್ ಸುಶೀಲ್ ಕುಮಾರ್ ಅವರೂ ವಾಪಸ್ ಆಗಿದ್ದು ಹುಲಿ ಸೆರೆಯಾಗುವುದೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಮುಖಂಡರು ಪ್ರಶ್ನಿಸಿದ್ದಾರೆ.
‘ಕೊಡಗು ಜನರು ಕಾಡು ಪ್ರಾಣಿಗಳ ದಾಳಿಯಿಂದ ತುಂಬ ಕಷ್ಟದಲ್ಲಿದ್ದಾರೆ. ಅರಣ್ಯ ಸಚಿವರು ಬಂದು ಧೈರ್ಯ ತುಂಬಬೇಕು’ ಎಂದು ಕವಿತಾ ಬೊಳಮ್ಮ ಎಂಬುವರು ಕೋರಿಕೊಂಡಿದ್ದಾರೆ.
‘ಕೃಷಿಕರು ಜೀವನ ನಡೆಸುವುದೇ ಕಷ್ಟವಾಗಿದೆ. ರೈತರ ಸಮಸ್ಯೆ ಅರಿಯಲು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಚಿವರು ಜಿಲ್ಲೆಗೆ ಬರಬೇಕು. ಅರಣ್ಯ ಇಲಾಖೆ ನಿದ್ರಾವಸ್ಥೆಯಲ್ಲಿದೆ. ಅದನ್ನು ಬಡಿದೆಬ್ಬಿಸಲು ಜಿಲ್ಲೆಗೆ ಬರಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಾದೇಟಿರ ತಿಮ್ಮಯ್ಯ ಒತ್ತಾಯಿಸಿದ್ದಾರೆ.
‘ಹುಲಿ ದಾಳಿಯಿಂದ ಸಾವು– ನೋವು ಸಂಭವಿಸುತ್ತಿದ್ದರೂ ಅರಣ್ಯ ಸಚಿವರು ಜಿಲ್ಲೆಗೆ ಬಂದಿಲ್ಲ. ಇನ್ನಾದರೂ ಬನ್ನಿ ಸಚಿವರೇ’ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಆಗ್ರಹಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.