ADVERTISEMENT

ಸುಮಾರು ₹ 20 ಕೋಟಿಗೆ ಮೊದಲ ಟ್ವೀಟ್‌ ಮಾರಾಟ ಮಾಡಿದ ಟ್ವಿಟರ್ ಸಿಇಒ ಜಾಕ್ ಡಾರ್ಸಿ

ಪಿಟಿಐ
Published 23 ಮಾರ್ಚ್ 2021, 10:36 IST
Last Updated 23 ಮಾರ್ಚ್ 2021, 10:36 IST
ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ 
ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ    

ಸ್ಯಾನ್ ಫ್ರಾನ್ಸಿಸ್ಕೋ: ಪ್ರತಿಷ್ಠಿತ ಜಾಲತಾಣ ಟ್ವಿಟರ್ ಸಿಇಒ ಜಾಕ್ ಡಾರ್ಸಿ, ಅವರು ತಮ್ಮ ಮೊದಲ ಟ್ವೀಟ್‌ನ ಡಿಜಿಟಲ್ ಆವೃತ್ತಿಯನ್ನು 2.9 ಮಿಲಿಯನ್ ಡಾಲರ್‌ ( ₹ 20.9 ಕೋಟಿ)ಗೆ ಮಾರಾಟ ಮಾಡಿದ್ದಾರೆ. ಎರಡು ವಾರಗಳ ಹಿಂದೆಯೇ ತಮ್ಮ ಪೋಸ್ಟ್ ಅನ್ನು ಡಿಜಿಟಲ್ ಹರಾಜಿನ ಮೂಲಕ ಮಾರಾಟ ಮಾಡುವುದಾಗಿ ಅವರು ಘೋಷಿಸಿದ್ದರು.

ಮಾರ್ಚ್ 2006 ‌ರಲ್ಲಿ "just setting up my twttr" ಎಂದು ಜಾಕ್ ಡಾರ್ಸಿ ಮಾಡಿದ್ದ ಟ್ವೀಟ್ ಅನ್ನು ಬ್ರಿಡ್ಜ್ ಒರಾಕಲ್ ಸಿಇಒ ಸಿನಾ ಎಸ್ಟಾವಿ ಅವರು ಖರೀದಿಸಿದ್ದಾರೆ ಎಂದು ಡಿಜಿಟಲ್ ಹರಾಜು ಪ್ರಕ್ರಿಯೆ ನಡೆಸಿದ ವ್ಯಾಲ್ಯೂಬಲ್ಸ್ ಸಂಸ್ಥೆ ಹೇಳಿದೆ.

15 ವರ್ಷದ ಪೋಸ್ಟ್ ಅನ್ನು ನಾನ್ ಫಂಗಿಬಲ್ ಟೋಕನ್ ಅಥವಾ ಎನ್‌ಎಫ್‌ಟಿ ಎಂದು ಮಾರಾಟ ಮಾಡಲಾಗಿದೆ - ಇದು ಒಂದು ವಸ್ತುವನ್ನು ನೈಜವೆಂದು ದೃಢೀಕರಿಸುವ ಡಿಜಿಟಲ್ ಪ್ರಮಾಣಪತ್ರ ಮತ್ತು ಬ್ಲಾಕ್‌ಚೈನ್ ಡಿಜಿಟಲ್ ಲೆಡ್ಜರ್‌ನಲ್ಲಿ ವಿವರಗಳನ್ನು ದಾಖಲಿಸುವ ಒಂದು ವೇದಿಕೆಯಾಗಿದೆ.

ADVERTISEMENT

ಈ ಬಗ್ಗೆ ತಿಂಗಳ ಆರಂಭದಲ್ಲಿ ಟ್ವೀಟ್ ಮಾಡಿ ತಿಳಿಸಿದ್ದ ಡಾರ್ಸಿ, ಟ್ವೀಟ್ ಹರಾಜಿನಲ್ಲಿ ಬರುವ ಆದಾಯವನ್ನು ಬ್ಯಾಂಕ್ ಅಥವಾ ಸರ್ಕಾರಕ್ಕೆ ಸಂಬಂಧಿಸದ ಡಿಜಿಟಲ್ ಕರೆನ್ಸಿಯಾಗಿ ಪರಿವರ್ತಿಸಲಾಗುವುದು ಮತ್ತು ಲಾಭೋದ್ದೇಶವಿಲ್ಲದ ಆಫ್ರಿಕಾದ ಚಾರಿಟಿಗೆ ನೀಡಲಾಗುವುದು ಎಂದು ಡಾರ್ಸೆ ಹೇಳಿದ್ದರು. ಕೊರೊನಾ ಸೋಂಕಿನ ಹೊಡೆತದಿಂದ ಆರ್ಥಿಕವಾಗಿ ದುರ್ಬಲರಾಗಿರುವ ಆಫ್ರಿಕನ್ ಕುಟುಂಬಗಳನ್ನು ಬೆಂಬಲಿಸಲು ಚಾರಿಟಿಗೆ ಹಣವನ್ನು ಸಂಗ್ರಹಿಸುತ್ತಿದ್ದೇನೆ ಎಂದು ತಿಳಿಸಿದ್ದರು.

ಹರಾಜು ಪ್ರಕ್ರಿಯೆ ನಡೆಸಿದ ವ್ಯಾಲ್ಯೂಬಲ್ಸ್ ಪ್ರಕಾರ, ಮಾರಾಟದಿಂದ ಬಂದಿರುವಆದಾಯದಲ್ಲಿ ಶೇ. 95 ರಷ್ಟು ಟ್ವೀಟ್‌ನ ಮೂಲ ಸೃಷ್ಟಿಕರ್ತರಿಗೆ ಹೋದರೆ, ಶೇ. 5 ರಷ್ಟು ಸಾಮಾಜಿಕ ಮಾಧ್ಯಮ ವೇದಿಕೆಗೆ ಹೋಗುತ್ತದೆ.

ಸೋಮವಾರ ಮಧ್ಯಾಹ್ನ ಡಾರ್ಸಿ, ಬಿಟ್‌ಕಾಯಿನ್ ರಶೀದಿಯನ್ನು ಟ್ವೀಟ್ ಮಾಡಿದ್ದು, ಹಣವನ್ನು ಚಾರಿಟಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

‘ಅದ್ಬುತ - ನಿಮ್ಮ ಈ ಸಹಾಯಕ್ಕೆ ಬಹಳ ಧನ್ಯವಾದಗಳು ಸಿನಾ ಎಸ್ಟಾವಿ. ಶೀಘ್ರದಲ್ಲೇ ಇದನ್ನು ಅರ್ಹರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ.’ ಎಂದು ಡಾರ್ಸಿ, ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎನ್‌ಎಫ್‌ಟಿಗಳು ಆನ್‌ಲೈನ್ ಸಂಗ್ರಹ ಜಗತ್ತನ್ನು ಆವರಿಸಿವೆ. ಈ ತಿಂಗಳ ಆರಂಭದಲ್ಲಿ ಕಲಾವಿದ ಬೀಪಲ್ ಅವರ ಡಿಜಿಟಲ್ ಕಲಾಕೃತಿಯುಬ್ರಿಟಿಷ್ ಆನ್‌ಲೈನ್ ಹರಾಜಿನಲ್ಲಿ 69.4 ಮಿಲಿಯನ್ ಡಾಲರ್‌ಗೆ ಮಾರಾಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.