ADVERTISEMENT

Twitter vs Threads: 'ಥ್ರೆಡ್ಸ್'ಗೆ ಒಮ್ಮೆ ಲಾಗಿನ್ ಮಾಡಿದರೆ ಖಾತೆ ಡಿಲೀಟ್ ಮಾಡಲಾಗದು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2023, 13:13 IST
Last Updated 6 ಜುಲೈ 2023, 13:13 IST
   

ನ್ಯೂಯಾರ್ಕ್: ಮೈಕ್ರೊಬ್ಲಾಗಿಂಗ್ ವೇದಿಕೆ ಟ್ವಿಟರ್‌ಗೆ ಪರ್ಯಾಯ ಎಂಬಂತೆ ಬಿಂಬಿತವಾಗಿರುವ 'ಥ್ರೆಡ್ಸ್' ಆ್ಯಪ್‌ ಇಂದು ಬಿಡುಗಡೆಗೊಂಡಿದೆ. ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯ ಈ 'ಥ್ರೆಡ್ಸ್' ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಥ್ರೆಡ್ಸ್‌ಗೆ ಸುಲಭವಾಗಿ ಲಾಗಿನ್‌ ಮಾಡಿಕೊಳ್ಳಬಹುದು. ಆದರೆ, ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಹೊಸ ಆ್ಯಪ್‌ ಹೇಗಿದೆ  ಎಂಬ ಕುತೂಹಲಕ್ಕೆ ನೀವೇನಾದರೂ ಲಾಗಿನ್‌ ಮಾಡಿಕೊಂಡರೆ ಮತ್ತೆ ಅದನ್ನು ಡಿಲೀಟ್‌ ಮಾಡಲು ಸಾಧ್ಯವಿಲ್ಲ. ಡಿಲಿಟ್‌ ಮಾಡಲೇಬೇಕು ಎಂದುಕೊಂಡರೆ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೂ ಅಳಿಸಬೇಕಾಗುತ್ತದೆ.

'ನೀವು ಯಾವಾಗ ಬೇಕಾದರೂ ನಿಮ್ಮ ಥ್ರೆಡ್ಸ್‌ ಖಾತೆಯನ್ನು ಡಿಆಕ್ಟಿವೇಟ್‌ (ನಿಷ್ಕ್ರಿಯ) ಮಾಡಬಹುದು. ಆದರೆ, ನಿಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಡಿಲಿಟ್‌ ಮಾಡಿದಾಗ ಮಾತ್ರವೇ, ಥ್ರೆಡ್ಸ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸಾಧ್ಯ' ಎಂದು ಥ್ರೆಡ್ಸ್‌ನ ಪ್ರೈವೆಸಿ ಪಾಲಿಸಿಯಲ್ಲಿ ಹೇಳಲಾಗಿದೆ.

ADVERTISEMENT

ಥ್ರೆಡ್ಸ್‌ ಖಾತೆಯನ್ನು ಒಮ್ಮೆ ನಿಷ್ಕ್ರಿಯಗೊಳಿಸಿದರೆ, ನಿಮ್ಮ ಖಾತೆಯನ್ನು ಬೇರೆ ಬಳಕೆದಾರರು ನೋಡಲು ಸಾಧ್ಯವಾಗದು. ಆದರೆ, ನೀವು ಹಂಚಿಕೊಂಡಿದ್ದ ಪೋಸ್ಟ್‌ಗಳು ಆ್ಯಪ್‌ನ ಸರ್ವರ್‌ ಮೂಲಕ ಲೈವ್‌ ಆಗುತ್ತಿರುತ್ತವೆ. ನೀವು ಅವುಗಳನ್ನು ಒಂದೊಂದಾಗಿ ಡಿಲಿಟ್‌ ಮಾಡಿದರೆ ಮಾತ್ರ ಎಲ್ಲೂ ಕಾಣದಂತೆ ಮಾಡಲು ಸಾಧ್ಯ.

ಇದನ್ನೂ ಓದಿ: Twitter vs Threads: ಭಾರತ ಸೇರಿ 100ಕ್ಕೂ ದೇಶಗಳಲ್ಲಿ 'ಥ್ರೆಡ್ಸ್' ಬಿಡುಗಡೆ

ಒಂದು ವೇಳೆ ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್‌ ಮಾಡಿದರೆ, ಥ್ರೆಡ್ಸ್‌ನಲ್ಲಿ ನೀವು ಹಂಚಿಕೊಂಡಿದ್ದ ಡಾಟಾ 90 ದಿನಗಳ ವರೆಗೆ ಆ್ಯಪ್‌ ಸರ್ವರ್‌ನಲ್ಲಿ ಉಳಿದಿರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.